ಸ್ವಚ್ಛ ನಗರಸಭೆ ಪ್ರಶಸ್ತಿಗೆ ಕೊಳ್ಳೇಗಾಲ ಭಾಜನವಾಗಲಿ

KGL 1
ಕೊಳ್ಳೇಗಾಲ ಪಟ್ಟಣದ ಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಶ್ರಮದಾನ ಶಿಬಿರದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.
Published on

ಕೊಳ್ಳೇಗಾಲ: ಜೋಗಿ ರಂಗಜೋಳಿಗೆ, ಈಶ್ವರಿ ಸೋಷಿಯಲ್ ಟ್ರಸ್ಟ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರಮದಾನ ಶಿಬಿರ ಆಯೋಜಿಸಲಾಗಿತ್ತು.

ಶಾಸಕ ಎ.ಆರ್.ಕೃಷ್ಣಮೂರ್ತಿ ಪೊರಕೆ ಹಿಡಿದು ಮೈದಾನದಲ್ಲಿ ಬಿದ್ದಿದ್ದ ಕಸವನ್ನು ತೆರವು ಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ, ಶಾಲಾ ಮಕ್ಕಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪೌರಕಾರ್ಮಿಕರು, ನಗರಸಭಾ ಸದಸ್ಯರು, ಅಧಿಕಾರಿಗಳು, ಸಾರ್ವಜನಿಕರು ಶಾಸಕರ ಜತೆಗೂಡಿ ಮೈದಾನದಲ್ಲಿ ಬೆಳೆದಿದ್ದ ಗಿಡ ಗಂಟಿಗಳು, ಪ್ಲಾಸ್ಟಿಕ್ ವಸ್ತುಗಳು, ತ್ಯಾಜ್ಯಗಳು, ಬಾಟಲಿ, ಪೌಚ್‌ಗಳನ್ನು ತೆರವುಗೊಳಿಸಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಸ್ವಚ್ಛ ನಗರಿ ಎಂಬ ಖ್ಯಾತಿಗೆ ಪಾತ್ರವಾಗಿ ರಾಷ್ಟ್ರದ ಗಮನ ಸೆಳೆದ ಮೈಸೂರಿನಂತೆಯೇ, ಕೊಳ್ಳೇಗಾಲ ಸ್ವಚ್ಛ ನಗರಸಭೆ ಎಂಬ ಪ್ರಶಸ್ತಿಗೆ ಭಾಜನವಾಗಬೇಕಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ನಗರಸಭೆ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಪುಂಡರ ವಿರುದ್ಧ ಕ್ರಮ: ಮೈದಾನದೊಳಗೆ ಪುಂಡರು ಮದ್ಯಸೇವೆನೆ ಮಾಡುತ್ತಿದ್ದಾರೆ. ಇಂತಹ ಪ್ರವೃತ್ತಿ ಮುಂದುವರಿದರೆ ಕ್ರಮ ಕಟ್ಟಿಟ್ಟ ಬುತ್ತಿ. ಮೈದಾನ ಪಕ್ಕದಲ್ಲಿರುವ ಬಸ್ತೀಪುರ ರಸ್ತೆಯಲ್ಲಿ ಎಳನೀರು ಮಾರುವವರು ಬುರುಡೆಗಳನ್ನು ಮೈದಾನದೊಳಗೆ ಇಟ್ಟಿದ್ದಾರೆ. ಈ ರೀತಿ ಮಾಡಿರುವವರಿಗೆ ನೋಟಿಸ್ ನೀಡಿ. ಅವರಿಂದಲೇ ತೆರವು ಮಾಡಿಸುವಂತೆ ಈಗಾಗಲೇ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ನಗರಸಭಾ ಸದಸ್ಯ ಶಾಂತರಾಜು ಬಸ್ತೀಪುರ, ಮಂಜುನಾಥ್, ಸುರೇಶ್, ರಾಘವೇಂದ್ರ, ಮಾಜಿ ಸದಸ್ಯ ಹರ್ಷ, ಅಕ್ಮಲ್ ಪಾಷ, ಪಟ್ಟಣ ಠಾಣೆ ಪಿಎಸ್‌ಐ ಮಹೇಶ್ ಕುಮಾರ್, ಎಂ.ಜಿ.ಎಸ್.ವಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎಚ್. ಚಂದ್ರಮ್ಮ, ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್, ಜೋಗಿ ರಂಗಜೋಳಿಗೆ ಸಂಸ್ಥಾಪಕ ಮೂರ್ತಿ ಮುಡಿಗುಂಡ, ಈಶ್ವರಿ ಸೋಷಿಯಲ್ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್, ರೋಟರಿ ಕ್ಲಬ್ ಅಧ್ಯಕ್ಷ ನಂದೀಶ್, ಕಾರ್ಯದರ್ಶಿ ಕುಮಾರಸ್ವಾಮಿ, ನಗರಸಭಾ ಆರೋಗ್ಯಾಧಿಕಾರಿ ಚೇತನ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಬಸ್ತೀಪುರ ರವಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೈರಾಜ್, ಮುಖಂಡ ಅಕ್ತರ್, ನಟರಾಜು ಮಾಳಿಗೆ, ದಶರಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net