

ಕುಂದಗೋಳ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಗುರುವಾರ ಬೆಳಗಿನ ಜಾವ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಬರದ್ವಾಡ ಗ್ರಾಮದ ಸಿಆರ್ಪಿಎಫ್ ಯೋಧ ಈಶ್ವರಪ್ಪ ಯಲ್ಲಪ್ಪ ಸೂರಣಗಿ ಅವರ ಅಂತ್ಯಸಂಸ್ಕಾರವನ್ನು ಅವರ ಸ್ವಗ್ರಾಮದ ಪ್ರಾಥಮಿಕ ಶಾಲೆ ಆವರಣದಲ್ಲಿ ಮಾಡಲು ಗ್ರಾಮದ ಗುರು-ಹಿರಿಯರು ನಿರ್ಧರಿಸಿದ್ದಾರೆ.
ಯೋಧನ ಅಂತ್ಯಸಂಸ್ಕಾರ ನೆರವೇರಿಸಲು ಸ್ಥಳ, ಸಮಯ, ಸಕಲ ಸಿದ್ಧತೆ ಕುರಿತು ಗ್ರಾಮದ ಗುರು-ಹಿರಿಯರು ಶುಕ್ರವಾರ ಬೆಳಗಿನ ಜಾವದಿಂದಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿದರು.
ಗ್ರಾಮದ ಬಳಿ ಇರುವ ಮೃತ ಯೋಧನ ಕುಟುಂಬದ ಸ್ವಂತ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡುವುದಾಗಿ ಗ್ರಾಮದ ಹಿರಿಯರು ತಿಳಿಸಿದರು. ಅದಕ್ಕೆ ಗ್ರಾಮದ ಕೆಲವರು ಒಪ್ಪಿಗೆ ನೀಡಿದರು. ಆದರೆ, ಗ್ರಾಮದ ಯುವಕರು ಗ್ರಾಮದ ಪ್ರಾಥಮಿಕ ಶಾಲೆ ಆವರಣದಲ್ಲಿ ಮಾಡಬೇಕು ಎಂದು ಪಟ್ಟು ಹಿಡಿದರು. ಆನಂತರ ಶಾಲೆಯ ಆವರಣದಲ್ಲಿ ಅಂತಿಮ ವಿಧಿ-ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಹಿರಿಯರು ಒಪ್ಪಿಗೆ ನೀಡಿದರು. ಯೋಧನ ಪಾರ್ಥಿವ ಶರೀರ ಬರದ್ವಾಡ ಗ್ರಾಮಕ್ಕೆ ಫೆ. 1ರಂದು ಬರಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.