ಸ್ವಕ್ಷೇತ್ರಕ್ಕೆ ಬಿಎಸ್​ವೈ ಬಂಪರ್ ಗಿಫ್ಟ್

yadyurappa (2)
Published on

ಶಿವಮೊಗ್ಗ: ಸ್ವಕ್ಷೇತ್ರ ಶಿಕಾರಿಪುರದಲ್ಲಿ ಚುನಾವಣೆ ಪ್ರಚಾರದ ವೇಳೆ ನೀಡಿದ್ದ ಭರವಸೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ. ಕ್ಷೇತ್ರಕ್ಕೆ ಭರ್ಜರಿ ನೀರಾವರಿ ಯೋಜನೆಗಳ ಕೊಡುಗೆ ನೀಡುತ್ತಿದ್ದಾರೆ.

ಫೆ.24ರಂದು ಒಂದೇ ದಿನ 1,280 ಕೋಟಿ ರೂ. ಮೊತ್ತದ ನೀರಾವರಿ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ಶಿಕಾರಿಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವದ ಮತ್ತೊಂದು ಅಧ್ಯಾಯ ಆರಂಭವಾಗಲಿದೆ. ಕೆಲ ವರ್ಷಗಳಿಂದ ತಾವು ನೀಡಿದ್ದ ಭರವಸೆಯನ್ನು ಸಿಎಂ ಸಾಕಾರಗೊಳಿಸುತ್ತಿದ್ದಾರೆ.

ಜಲಸಂಪನ್ಮೂಲ, ಆರೋಗ್ಯ, ಸಾರಿಗೆ, ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ. ಕಳೆದ ಕೆಲ ವರ್ಷಗಳಿಂದ ಚರ್ಚೆಯಲ್ಲಿರುವ ಹಲವು ಕಾಮಗಾರಿಗಳು ಅನುಷ್ಠಾನಕ್ಕೆ ಬರುತ್ತಿರುವುದರಿಂದ ತಾಲೂಕಿನ ಜನರಲ್ಲಿ ಹರ್ಷ ಮನೆಮಾಡಿದೆ.

ಪಾದಯಾತ್ರೆ ನಡೆಸಿದ್ದ ಬಿವೈಆರ್: ಶಿಕಾರಿಪುರ ತಾಲೂಕಿನ ಮೂರು ಹೋಬಳಿಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆ ರೂಪಿಸುವಂತೆ ಆಗ್ರಹಿಸಿ 2016ರ ಅಕ್ಟೋಬರ್​ನಲ್ಲಿ ಅಂದಿನ ಶಾಸಕ ಬಿ.ವೈ.ರಾಘವೇಂದ್ರ ಶಿರಾಳಕೊಪ್ಪದಿಂದ ಶಿಕಾರಿಪುರದವರೆಗೆ ಪಾದಯಾತ್ರೆ ನಡೆಸಿದ್ದರು. ಉಡುಗಣಿ, ಹೊಸೂರು, ತಾಳಗುಂದ ಹೋಬಳಿಯ ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಆ ಸಂದರ್ಭದಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ್ದ ಅಂದಿನ ಲೋಕಸಭಾ ಸದಸ್ಯ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪ, ಶಿಕಾರಿಪುರ ತಾಲೂಕಿನ ಮೂರು ಹೋಬಳಿಗಳಲ್ಲಿ ಕುಡಿಯವ ನೀರಿನ ಸಮಸ್ಯೆ ತೀವ್ರವಾಗಿದೆ. ಹೀಗಾಗಿ ವರದಾ ನದಿ ಇಲ್ಲವೇ ತುಂಗಭದ್ರಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸುವ ಯೋಜನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಶೀಲವಂತನಕೊಪ್ಪ ಕೆರೆಯನ್ನು ಏತ ನೀರಾವರಿ ಮೂಲಕ ತುಂಬಿಸಬೇಕೆಂದು ಒತ್ತಾಯಿಸಿದ್ದರು.

ಈಗ ಅವರೇ ಮುಖ್ಯಮಂತ್ರಿಯಾಗಿ ತಮ್ಮ ಕನಸಿನ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ. ಶೀಲವಂತನಕೊಪ್ಪ ಏತ ನೀರಾವರಿ ಯೋಜನೆಯನ್ನು ಉದ್ಘಾಟಿಸುತ್ತಿದ್ದಾರೆ.

ನೀರಾವರಿ ಯೋಜನೆಗಳ ವಿವರ: ಪುರದಕೆರೆ ಏತ ನೀರಾವರಿ: ಹಿರೇಕೆರೂರು ತಾಲೂಕು ಪುರದಕೆರೆ ಸಮೀಪ ತುಂಗಭದ್ರಾ ನದಿಯಿಂದ ಶಿಕಾರಿಪುರ ತಾಲೂಕಿನ ತಾಳಗುಂದ, ಉಡುಗಣಿ, ಹೊಸೂರು ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಇದರಿಂದ ಸಾವಿರಾರು ಎಕರೆ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ.

ಹೊಸಹಳ್ಳಿ ಏತ ನೀರಾವರಿ: ಶಿವಮೊಗ್ಗ ಹೊರವಲಯದ ಹೊಸಹಳ್ಳಿ ಸಮೀಪದಿಂದ ಏತ ನೀರಾವರಿ ಮೂಲಕ ಶಿವಮೊಗ್ಗ ಗ್ರಾಮಾಂತರದ ವಿವಿಧ ಕೆರೆಗಳನ್ನು ತುಂಬಿಸಿ, ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯಕ್ಕೆ ನೀರು ಕೊಂಡೊಯ್ಯುವ ಯೋಜನೆಯಿದು.

ಮತ್ತೊಂದು ಆಸ್ಪತ್ರೆ: ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆ ಅತ್ಯಂತ ಸುಸಜ್ಜಿತವಾಗಿದೆ. ಈಗ ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಆಸ್ಪತ್ರೆ ನಿರ್ವಣಕ್ಕೆ ಕಾಲ ಕೂಡಿಬಂದಿದೆ. 60 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ವಣಕ್ಕೆ ಶಿಕಾರಿಪುರದ ಕೆಎಚ್​ಬಿ ಬಡಾವಣೆಯಲ್ಲಿ ಭೂಮಿ ಗುರುತಿಸಲಾಗಿದೆ. 15 ಕೋಟಿ ರೂ. ಮೊತ್ತದ ಕಾಮಗಾರಿಗೆ ಬಿಎಸ್​ವೈ ಚಾಲನೆ ನೀಡಲಿದ್ದಾರೆ.

ಡಿಪೋ-ನಿಲ್ದಾಣ: ಶಿಕಾರಿಪುರದಲ್ಲಿ ಕೆಎಸ್​ಆರ್​ಟಿಸಿಯಿಂದ ತಾತ್ಕಾಲಿಕವಾಗಿ ಬಸ್ ನಿಲ್ದಾಣ ಆರಂಭಿಸಲಾಗಿದೆ. ನಿರ್ವಾಹಕರು, ನಿಲ್ದಾಣದ ಅಧಿಕಾರಿಗಳಿಗೆ ಮಾತ್ರ ಇದು ಸೀಮಿತವಾಗಿದೆ. ಸಾರ್ವಜನಿಕರಿಗೆ ಇಲ್ಲಿ ಸಂಪೂರ್ಣ ನೆರಳು ಇಲ್ಲದೇ ಸಮಸ್ಯೆಯಾಗುತ್ತಿತ್ತು. ಇದೀಗ 1.25 ಕೋಟಿ ರೂ. ಮೊತ್ತದಲ್ಲಿ ಪೂರ್ಣ ಪ್ರಮಾಣದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ನಿರ್ವಣಕ್ಕೆ ಬಿಎಸ್​ವೈ ಶಂಕುಸ್ಥಾಪನೆ ಮಾಡಲಿದ್ದಾರೆ. ಕುಟ್ರಳ್ಳಿ ಸಮೀಪ 8.29 ಕೋಟಿ ರೂ. ವೆಚ್ಚದಲ್ಲಿ ಕೆಎಸ್​ಆರ್​ಟಿಸಿ ಡಿಪೋ ನಿರ್ವಣಕ್ಕೆ ಚಾಲನೆ ಸಿಗಲಿದೆ. ಇದರೊಂದಿಗೆ ಶಿಕಾರಿಪುರ ತಾಲೂಕಿನಲ್ಲಿ ಕೆಎಸ್​ಆರ್​ಟಿಸಿ ಸೇವೆಗೆ ಮತ್ತಷ್ಟು ವೇಗ ಸಿಕ್ಕಂತಾಗುತ್ತದೆ.

ಹಲವು ಸಚಿವರ ಉಪಸ್ಥಿತಿ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಡಿಸಿಎಂ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸೇರಿ ಹಲವು ಸಚಿವರು ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net