

ಶಿಡ್ಲಘಟ್ಟ : ಮಹಿಳಾ ಸ್ವಸಹಾಯ ಸಂಘದ ಸದಸ್ಯರು 50-100 ಜನರ ಗುಂಪು ರಚಿಸಿಕೊಂಡು ಸ್ವಯಂಉದ್ಯೋಗ ಮಾಡಲು ಮುಂದಾದಲ್ಲಿ, ಯಾವುದೇ ಭದ್ರತೆಯಿಲ್ಲದೇ ಡಿಸಿಸಿ ಬ್ಯಾಂಕ್‌ನಿಂದ ಮತ್ತಷ್ಟು ಸಾಲ ಸೌಲಭ್ಯ ನೀಡಲಾಗುವುದು ಎಂದು ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾಲದ ಚೆಕ್ ವಿತರಿಸಿ ಮಾತನಾಡಿದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಠಿಸಲು ಡಿಸಿಸಿ ಬ್ಯಾಂಕ್ ಮುಂದಾಗಿದೆ. ಪ್ರತಿಯೊಬ್ಬರೂ ಸ್ವಯಂಉದ್ಯೋಗ ಕೈಗೊಳ್ಳಲು ಮುಂದಾಗಬೇಕು. ನಮ್ಮಲ್ಲಿ ಸಾಲ ಪಡೆದು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವ ಪ್ರವೃತ್ತಿಯನ್ನು ಬಿಡುವಂತೆ ಮನವಿ ಮಾಡಿದರು.
ಆರ್ಥಿಕ ಸಂಕಷ್ಟದ ನಡುವೆಯೂ ಬ್ಯಾಂಕ್ ನೀಡುತ್ತಿರುವ ಸಾಲವನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು ಶಾಸಕ ವಿ.ಮುನಿಯಪ್ಪ ಸಲಹೆ ನೀಡಿದರು.ರಾಜ್ಯದಲ್ಲೇ ಅತಿಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿದ ಕೀರ್ತಿ ಕೋಲಾರ ಚಿಕ್ಕಬಳ್ಳಾಪುರ ಸಹಕಾರ ಬ್ಯಾಂಕಿಗೆ ಸಲ್ಲುತ್ತದೆ ಎಂದು ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ತಿಳಿಸಿದರು.
ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷರಾದ ಶೆಟ್ಟಹಳ್ಳಿ ರಾಮಚಂದ್ರಪ್ಪ, ವಿ.ಬಿ.ನಾರಾಯಣಸ್ವಾಮಿ, ನಿರ್ದೇಶಕರಾದ ವೇಣುಗೋಪಾಲ್, ನರಸಿಂಹಮೂರ್ತಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಮೇಲ್ವಿಚಾರಕ ಶ್ರೀನಾಥ್, ಟೌನ್ ಎಸ್‌ಎಫ್‌ಸಿಎಸ್ ಕಾರ್ಯನಿರ್ವಹಣಾಧಿಕಾರಿ ದೇವಿಕ, ಮತ್ತಿತರರು ಹಾಜರಿದ್ದರು.