ಸ್ವಂತ ಖರ್ಚಿನಿಂದ ಮನೆ ನಿರ್ಮಾಣ

BIRUR home
ಬೀರೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ಮನೆಗೆ ಮಾಲೀಕರೇ ಆರ್‌ಸಿಸಿ ಹಾಕಿಸುತ್ತಿರುವುದು.
Published on

ಬೀರೂರು: ಕೊಳಚೆ ನಿರ್ಮೂಲನಾ ಮಂಡಳಿ ಗುರುತಿಸಿದ ಕೊಳೆಗೇರಿಗಳಲ್ಲಿ ನಿರ್ಮಿಸುತ್ತಿರುವ ಮನೆಗಳು ಕಳೆದ ಎರಡು ವರ್ಷಗಳಿಂದ ಪೂರ್ಣಗೊಳ್ಳುವ ಲಕ್ಷಣ ಕಾಣಿಸದಿದ್ದರಿಂದ ಲಾನುಭವಿಗಳು ಸ್ವಂತ ಖರ್ಚಿನಿಂದ ಕಾಮಗಾರಿ ಪೂರ್ಣಗೊಳಿಸಿಕೊಳ್ಳಲು ಮುಂದಾಗಿದ್ದಾರೆ.

ಬೀರೂರಿನ ಸರಸ್ವತಿಪುರಂ ಬಡಾವಣೆ, ಜಲಗಿರಿಬಾವಿ ಬೀದಿ, ಭೋವಿ ಕಾಲನಿ, ಬಳ್ಳಾರಿ ಕ್ಯಾಂಪ್, ಅಂಬೇಡ್ಕರ್ ನಗರ, ಶಿವಾಜಿ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ 300 ಮನೆಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಅನುಮೋದನೆ ದೊರೆತಿತ್ತು. ಅದರಂತೆ ಯೋಜನೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇತರ ವರ್ಗದವರೂ ಸೇರಿದಂತೆ 40 ಕುಟುಂಬಗಳು ಮಂಡಳಿ ಹೆಸರಿನಲ್ಲಿ ವರ್ಗಕ್ಕೆ ಮೀಸಲಾದ ಹಣವನ್ನು ಡಿಡಿ ತೆಗೆದು ಮಂಡಳಿಗೆ ಪಾವತಿಸಿದ್ದಾರೆ. ಆ ಪೈಕಿ 22 ಮನೆಗಳ ಕಾಮಗಾರಿ ಆರಂಭಿಸಲಾಗಿದೆ. ಅದರಲ್ಲಿ ಕೆಲವು ತಳಪಾಯ ಮಾತ್ರ ಕಂಡರೆ ಇನ್ನುಳಿದ ಮನೆಗಳು ಆರ್‌ಸಿಸಿ ಮಟ್ಟ ತಲುಪಿವೆ. ಬಾಕಿ ಉಳಿದಿರುವ ಮನೆಗಳ ಕೆಲಸವೇ ಆರಂಭಿಸಿಲ್ಲ.

2023ರ ಮಾರ್ಚ್‌ನಲ್ಲಿ ಪ್ರಾರಂಭವಾಗಿ ಇಲ್ಲಿಯವರೆಗೂ ಪೂರ್ಣಗೊಳ್ಳುವ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಲಾನುಭವಿಗಳೇ ಸಾಲ ಮಾಡಿ ಸ್ವಂತ ಖರ್ಚಿನಿಂದ ಕೆಲಸ ಆರಂಭಿಸಿ ಆರ್‌ಸಿಸಿಯನ್ನು ಹಾಕಿಸುತ್ತಿದ್ದಾರೆ. ಇದರ ಮಾಹಿತಿ ನೀಡಿದರೂ ಸಂಬಂಧಪಟ್ಟವರು ಬರದಿದ್ದಲ್ಲಿ ಮನೆ ಕೆಲಸವನ್ನು ಸಂಪೂರ್ಣಗೊಳಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಆದರೆ ಅಲ್ಪ ಪ್ರಮಾಣದಲ್ಲಿ ಕಾಮಗಾರಿಯಾಗಿರುವ ಇನ್ನೂ ಕೆಲವು ಮನೆಗಳ ಮಾಲೀಕರು ಯಾವುದೇ ಕೆಲಸಕ್ಕೆ ಮುಂದಾಗದೆ ಗುತ್ತಿಗೆದಾರರನ್ನು ಕಾಯುತ್ತಿದ್ದಾರೆ.

ಹೊಸ ಮನೆಯ ಆಶಯದಿಂದ ಇದ್ದ ಗುಡಿಸಲನ್ನು ಕಳೆದುಕೊಂಡಿರುವ ಇಂತಹ ಹತ್ತಾರು ಕುಟುಂಬಗಳ ಕೋರಿಕೆಯಂತೆ ಶೀಘ್ರದಲ್ಲಿ ಅವರ ಕನಸಿನ ಮನೆಯನ್ನು ನಿರ್ಮಿಸಿಕೊಡಲು ಅಧಿಕಾರಿಗಳು ಗಮನಹರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net