ಸ್ವಂತ ಊರುಗಳಿಗೆ ತೆರಳಿದ 83 ಕಾರ್ವಿುಕರು

30SIRSI2
Published on

ಶಿರಸಿ: ಕೆಲಸಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತಾಲೂಕಿಗೆ ಆಗಮಿಸಿ ಲಾಕ್​ಡೌನ್ ಸಂದರ್ಭದಲ್ಲಿ ಸಿಲುಕಿದ್ದ 83 ಕಾರ್ವಿುಕರಿಗೆ ತಾಲೂಕಾಡಳಿತ ಗುರುವಾರ ತವರು ಭಾಗ್ಯ ಕರುಣಿಸಿದೆ. ನಾಲ್ಕು ಬಸ್​ಗಳಲ್ಲಿ ವಲಸೆ ಕಾರ್ವಿುಕರನ್ನು ಗೌರವಯುತವಾಗಿ ಕಳುಹಿಸಿ ಕೊಟ್ಟಿದೆ.

ಎರಡು ತಿಂಗಳ ಹಿಂದೆ ಶಿರಸಿಗೆ ವಿವಿಧ ಕೆಲಸಕ್ಕೆಂದು ಆಗಮಿಸಿದ್ದ ಹೊನ್ನಾವರ, ಬೈಂದೂರ, ಮಾವಿನಗುಂಡಿ, ಕುಂದಾಪುರ, ಹಿರೇಮಣ್ಣಾಪುರ, ಕುಷ್ಟಗಿ, ಹಾನಗಲ್ ಇತರ ಕಡೆಗಳಿಂದ ಆಗಮಿಸಿ ಲಾಕ್​ಡೌನ್​ನಿಂದಾಗಿ ತಮ್ಮ ಊರುಗಳಿಗೆ ಮರಳಲಾಗದೇ ತಾಲೂಕಿನಲ್ಲಿ ಸಿಲಿಕಿದ್ದರು. ಇಂತಹ 83 ಕಾರ್ವಿುಕರನ್ನು ತಾಲೂಕಾಡಳಿತ ವೈದ್ಯಕೀಯ ಪರೀಕ್ಷೆ ನಡೆಸಿ ಇಲ್ಲಿನ ತಹಸೀಲ್ದಾರ್ ಕಚೇರಿಯಿಂದ ಸಾರಿಗೆ ಸಂಸ್ಥೆಯ ನಾಲ್ಕು ಬಸ್​ಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಕಿಸುವುದರ ಜತೆಗೆ ಸಾಮಾಜಿಕ ಅಂತರದೊಂದಿಗೆ ಪ್ರತಿ ಬಸ್​ಗೆ 20 ಮಂದಿಯಂತೆ ಅವರವರ ಊರುಗಳಿಗೆ ಕಳುಹಿಸಿಕೊಡಲಾಗಿದೆ. ಕೆಲಸಕ್ಕೆಂದು ಬಂದು ಲಾಕ್​ಡೌನ್​ಗೆ ಸಿಲುಕಿ ತವರಿಗೆ ಹೋಗಲಾಗದೇ ಚಡಪಡಿಸುತ್ತಿದ್ದ ವಲಸೆ ಕಾರ್ವಿುಕರಿಗೆ ಅಂತೂ ತವರು ಭಾಗ್ಯ ದೊರೆತಿದ್ದು, ನೆಮ್ಮದಿಯಿಂದ ಮೂಲಸ್ಥಾನಗಳಿಗೆ ಮರಳಿದರು.

ಕಟ್ಟಡ ಕಾಮಗಾರಿ ನಿಮಿತ್ತ ಕುಷ್ಟಗಿಯಿಂದ ಕೆಲವು ಕಾರ್ವಿುಕರು ನಗರಕ್ಕೆ ಆಗಮಿಸಿದ್ದೆವು. ಆದರೆ, ಕರೊನಾ ಕಾರಣದಿಂದ ಸಾರಿಗೆ ಬಂದ್ ಆದ ಕಾರಣ ಇಲ್ಲಿಯೇ ಉಳಿಯುವಂತಾಗಿತ್ತು. ತಾಲೂಕು ಆಡಳಿತದ ಮುತುವರ್ಜಿಯಿಂದ ಮರಳಿ ಊರಿಗೆ ತೆರಳಲು ಅನುಕೂಲವಾಗಿದೆ. | ಹೊನ್ನಪ್ಪ ರೆಡ್ಡಿ ವಲಸೆ ಕಾರ್ವಿುಕ ಯಾವುದೇ ಕಾರ್ವಿುಕನಿಗೂ ತೊಂದರೆಯಾಗದಂತೆ ತಾಲೂಕಾಡಳಿತ ಕ್ರಮ ಕೈಗೊಂಡಿದೆ. ಸುರಕ್ಷಿತವಾಗಿ ಅವರವರ ಊರುಗಳಿಗೆ ತೆರಳಲು ಸರ್ಕಾರದಿಂದ ವ್ಯವಸ್ಥೆ ಮಾಡಲಾಗಿದೆ. | ಎಂ.ಆರ್. ಕುಲಕರ್ಣಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net