ಸ್ವಂತ ಊರಿನಲ್ಲೇ ವೃತ್ತಿ ಬದುಕು ಕಟ್ಟಿಕೊಳ್ಳುವ ಧೋರಣೆ ಬಿಡಿ: ಡಾ.ಸಿ.ಎಲ್.ಲಕ್ಷ್ಮೀಪತಿಗೌಡ ಸಲಹೆ

30_HSN_01
Published on

ಹಾಸನ: ಸ್ವಂತ ಊರಿನಲ್ಲೇ ವೃತ್ತಿ ಬದುಕು ಕಟ್ಟಿಕೊಳ್ಳಬೇಕೆಂಬ ಧೋರಣೆ ಬದಲಿಸಿಕೊಂಡು ಅವಕಾಶ ಸಿಕ್ಕ ಕಡೆ ನೆಲೆ ನಿಲ್ಲುವ ಮನೋಭಾವ ಹೊಂದುವುದು ಸೂಕ್ತವೆಂದು ಹೈದರಾಬಾದ್‌ನ ಅಂತಾರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ (ಐಸಿಆರ್‌ಐಎಸ್‌ಎಟಿ) ಮಾಜಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ.ಸಿ.ಎಲ್.ಲಕ್ಷ್ಮೀಪತಿಗೌಡ ಅಭಿಪ್ರಾಯಪಟ್ಟರು.

ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ‘ಮಲ್ನಾಡ್ ಫೆಸ್ಟ್’ ನ ಮೊದಲ ದಿನದ ಕಾರ್ಯಕ್ರಮಗಳಿಗೆ ಗುರುವಾರ ಸಂಜೆ ಚಾಲನೆ ನೀಡಿ ಮಾತನಾಡಿದ ಅವರು, ವಿಭಿನ್ನ ಸಂಸ್ಕೃತಿ ಆಚರಣೆಗಳಿರುವ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಬದುಕಿನಲ್ಲಿ ಹೆಚ್ಚು ಕಲಿಯಬಹುದು. ತರಗತಿಗಿಂತ ಹೊರಗಿನ ಪ್ರಪಂಚದಲ್ಲಿ ಕಲಿಯುವುದು ಹೆಚ್ಚಿರುತ್ತದೆ. ಪದವಿ ಪ್ರವೇಶ ಪಡೆದು ಮುಗಿಸುವುದರೊಳಗೆ ಶೇ.50ಕ್ಕಿಂತ ಹೆಚ್ಚು ತಂತ್ರಜ್ಞಾನಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ತಂತ್ರಜ್ಞಾನಗಳು ತೀವ್ರಗತಿಯಲ್ಲಿ ಬದಲಾಗುತ್ತಿವೆ ಎಂದು ತಿಳಿಸಿದರು.

ಸಂವಹನ ಕೌಶಲ ಹೊಂದುವುದು ಅತ್ಯಗತ್ಯ. ಜಾತಿ-ಧರ್ಮಾಧಾರಿತ ಸಂಘರ್ಷದಲ್ಲಿ ತೊಡಗಿಕೊಳ್ಳಬೇಡಿ. ಅದರಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ. ವಿದ್ಯಾರ್ಥಿಗಳು ದೊಡ್ಡದಾಗಿ ಕನಸು ಕಾಣಬೇಕು ಎಂದು ಸಲಹೆ ನೀಡಿದರು.

ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ ಅವರು ಮಾತನಾಡಿ, ಇಂಜಿನಿಯರಿಂಗ್ ಅಧ್ಯಯನದ ಜತೆಗೆ ಯುಪಿಎಸ್‌ಸಿ ಪರೀಕ್ಷೆಗಳಿಗೂ ಸಿದ್ಧತೆ ನಡೆಸಲು ಸಾಧ್ಯವಿದೆ. ಸಮಯ ಪ್ರಕೃತಿ ಕೊಟ್ಟಿರುವ ವರ. ಅದರ ಸದ್ಬಳಕೆ ಮಾಡಿಕೊಂಡು ಅಧ್ಯಯನ ನಡೆಸಿದರೆ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು ಎಂದರು.

ಹಾಸನ ಮಹಾನಗರಪಾಲಿಕೆಯ ಅಧ್ಯಕ್ಷ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಎಂ.ಚಂದ್ರೇಗೌಡ ಅವರು ಮಾತನಾಡಿ, ಕ್ರೀಡೆ-ಸಾಂಸ್ಕೃತಿಕ ಕಾರ್ಯಕ್ರಮಗಳು ಓದಿನಷ್ಟೇ ಮುಖ್ಯ. ಕಾಲೇಜು ಕೇವಲ ಪದವಿ ಮಾತ್ರ ನೀಡುವುದಿಲ್ಲ, ಅಗಾಧ ಜೀವನಾನುಭವವನ್ನೂ ನೀಡಲಿದೆ. ನಗುವುದು-ನಗಿಸುವುದನ್ನು ಕಲಿಯಬೇಕು. ಒಳ್ಳೆಯ ಮಾತು, ಬಾಂಧವ್ಯ ಮತ್ತು ಕಾಲೇಜಿನ ಕುರಿತು ಪ್ರೀತಿ ಇರಲಿ ಎಂದು ಹೇಳಿದರು.

ಎಸ್ಸೀ ಪ್ರಿಂಟ್ ಪ್ಯಾಕ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಹಳೆ ವಿದ್ಯಾರ್ಥಿ ಕೆ.ಆರ್.ಚಂದ್ರಶೇಖರ್ ಅವರು ಮಾತನಾಡಿ, ಪ್ರಿಂಟಿಂಗ್ ಮತ್ತು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಇಂದು 3 ಲಕ್ಷ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ವೃತ್ತಿ ಬದುಕು ಪ್ರಾರಂಭಿಸಿ ನಂತರ ಸ್ವಂತ ಉದ್ಯಮ ಸ್ಥಾಪಿಸಲು ವಿಫುಲ ಅವಕಾಶವಿದೆ ಎಂದು ತಿಳಿಸಿದರು.

ಐದನೇ ಸೆಮಿಸ್ಟರ್‌ವರೆಗೂ ಅತಿ ಹೆಚ್ಚು ಅಂಕ ಗಳಿಸಿರುವ ಕಾಲೇಜಿನ ಒಂಭತ್ತು ವಿದ್ಯಾರ್ಥಿಗಳಿಗೆ 1983ನೇ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳು ಮೈತ್ರಿ-83 ಎಂ. ಫೌಂಡೇಶನ್’ ಮೂಲಕ ನೀಡಿರುವ ಟ್ಯಾಬ್‌ಗಳನ್ನು ವಿತರಿಸಲಾಯಿತು.

ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ, ಉಪಾಧ್ಯಕ್ಷ ಬಿ.ಆರ್.ಗುರುದೇವ್, ಕಾರ್ಯದರ್ಶಿ ಸಿ.ಆರ್.ಜಗದೀಶ್, ಖಜಾಂಚಿ ಪಾರ್ಶ್ವನಾಥ್, ಪ್ರಾಂಶುಪಾಲ ಡಾ.ಎ.ಜೆ.ಕೃಷ್ಣಯ್ಯ, ಮಲೆನಾಡು ಕಾಲೇಜು ನಿರ್ದೇಶಕ ಡಾ.ಎಸ್.ಪ್ರದೀಪ್, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ನಿರ್ದೇಶಕರಾದ ಡಿ.ಬಿ.ಹೇಮಂತ ಕುಮಾರ್, ಬಿ.ವಿ.ಶ್ರೀನಿವಾಸ್, ಜಿ.ಕೆ.ಶಂಕರ್, ಬಿ.ಆರ್.ರಾಜಶೇಖರ್, ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಕೆ.ಎಸ್.ಜಯಂತ, ಡೀನ್ ಡಾ.ಕೆ.ಆರ್.ದುಶ್ಯಂತ್ ಕುಮಾರ್, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net