

ವಿಜಯವಾಣಿ ಸುದ್ದಿಜಾಲ ಆನವಟ್ಟಿ
ನಾಯಕನಾದವನು ತನ್ನ ಜೀವಮಾನದಲ್ಲಿ ಹಲವಾರು ಸನ್ಮಾನ, ಪುರಸ್ಕಾರಗಳನ್ನು ಕಂಡಿದ್ದರೂ ತನ್ನದೇ ಊರಲ್ಲಿ ಸ್ನೇಹಿತರು, ಬಂಧು ಬಳಗದವರಿಂದ ಪಡೆಯುವ ಸನ್ಮಾನ ತುಂಬ ಮಹತ್ವದ್ದಾಗಿದೆ. ಈ ಸನ್ಮಾನದಿಂದ ತೃಪ್ತಿ ದೊರೆಯುತ್ತದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಆನವಟ್ಟಿ ಯಲಿವಾಳ ಗ್ರಾಮದಲ್ಲಿ ಆಯೋಜಿಸಿದ್ದ ‘ನಾನು ಓದಿದ ಶಾಲೆ’ ಕಾರ್ಯಕ್ರಮದಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ತಂದೆ ತಾಯಿ ಸ್ಮರಣಾರ್ಥ ನಾನು ಓದಿದ ಶಾಲೆ ಎಂಬ ಕಾರ್ಯಕ್ರಮದ ಮೂಲಕ ನೂತನ ಶಾಲಾ ಕೊಠಡಿಯನ್ನು ಕಟ್ಟಿಸಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿ ರಾಜ್ಯದ ಕೃಷಿ ಮಂತ್ರಿವರೆಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದು, ಇದಕ್ಕೆ ಬುನಾದಿಯಾಗಿರುವ ಶಾಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಹಸಿದವನಿಗೆ ಅನ್ನ ಹಾಕಿದರೆ ಆತ ಕೇವಲ ಕ್ಷಣಿಕ ಸಂತೋಷವಾಗಿರುತ್ತಾನೆ. ಆದರೆ ಜೀವನದ ಹಸಿವನ್ನು ಕೇವಲ ವಿದ್ಯೆ ಮಾತ್ರ ನೀಗಿಸಬಲ್ಲದು. ಅಂತಹ ವಿದ್ಯಾ ದಾಸೋಹ ನಡೆಯುವ ಶಾಲಾ ಕಟ್ಟಡ ನಿರ್ಮಿಸಿಕೊಡುವ ಮೂಲಕ ಬಿ.ಸಿ.ಪಾಟೀಲ್ ಉತ್ತಮ ಕಾರ್ಯ ಮಾಡಿದ್ದಾರೆ ಎಂದರು.
ವನಜಾ ಪಾಟೀಲ್, ಸೌಮ್ಯಾ ಪಾಟೀಲ್, ಸೃಷ್ಟಿ ಪಾಟೀಲ್, ಮುಖಂಡರಾದ ರಾಜು ಎಂ. ತಲ್ಲೂರು, ದೊಡ್ಡಗೌಡ ಸಿ ಪಾಟೀಲ್, ಗಣೇಶ್ ಭರಮಪ್ಪ, ಕಲಾವತಿ ಮಂಜಪ್ಪ, ಭಾಗ್ಯ ಬಸವರಾಜ್, ಬಸಣ್ಣ ಭಾರಂಗಿ, ಪ್ರಕಾಶ್ ಅಗಸನಹಳ್ಳಿ, ಬಿಜೆಪಿ ತಾಲೂಕು ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಸುಧಾ ಶಿವಪ್ರಸಾದ್, ಮಲ್ಲಿಕಾರ್ಜುನ ಗುತ್ತಿ, ಇದ್ದರು. ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಿಂದ ರಕ್ತದಾನ ಶಿಬಿರ ನಡೆಸಲಾಯಿತು.
ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಗುಣಗಳನ್ನು ಕಲಿಸುವಲ್ಲಿ ಮುಂದಾಗಬೇಕು. ಜಿಲ್ಲೆಯಲ್ಲಿ ಸಂಸದರ ಅನುದಾನದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಹಾಗೆಯೇ ಗ್ರಾಮೀಣ ಜನರು ತಮ್ಮ ಗ್ರಾಮಗಳಲ್ಲಿನ ಕಾಮಗಾರಿಗಳಿಗಾಗಿ ಶಾಸಕರು, ಸಚಿವರು ಮತ್ತು ಸಂಸದರನ್ನು ಬೇಟಿಯಾಗಿ ಯೋಜನೆಗಳ ಉಪಯೋಗ ಪಡೆಯಬೇಕು.
ಬಿ.ವೈ.ರಾಘವೇಂದ್ರ, ಸಂಸದ