ಸ್ವ ಉದ್ಯೋಗಿಗಳಿಗೆ ಉನ್ನತಿ ಯೋಜನೆ ಜಾರಿ: ಏಕನಾಥಸ್ವಾಮಿ

22 klr-1
Published on

ಕೋಲಾರ: ಕೋವಿಡ್ ಕಾರಣದಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದು, ಅಂತವರಿಗೆ ಸ್ವ ಉದ್ಯೋಗದ ಮೂಲಕ ಜೀವನ ರೂಪಿಸುವ ಸಲುವಾಗಿ ಉನ್ನತಿ ಎಂಬ ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತಿದೆ ಎಂದು ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ನ ಉಪ ನಿರ್ದೇಶಕ ಏಕನಾಥಸ್ವಾಮಿ ಹೇಳಿದರು.

ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ಯಂತ್ರ ತರಬೇತಿ ಶಿಬಿರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಉನ್ನತಿ ಯೋಜನೆ ಮೂಲಕ ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವವರಿಗೆ, ಸ್ತಿ ಶಕ್ತಿ ಸ್ವ ಸಹಾಯ ಸಂಘದ ಸದಸ್ಯರಿಗೆ ಹಾಗೂ ನರೇಗಾ ಯೋಜನೆಯ ಉದ್ಯೋಗ ಚೀಟಿ ಹೊಂದಿರುವ ಕುಟುಂಬದವರಿಗೆ ಸ್ವ ಉದ್ಯೋಗಧಾರಿತ ತರಬೇತಿ ನೀಡಿ ಅವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು.

ಟೈಲರಿಂಗ್ ವೃತ್ತಿಯು ಮಹಿಳೆಯರ ಸ್ವಾವಲಂಭಿ ಜೀವನಕ್ಕೆ ಪೂರಕವಾಗಿದೆ. ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಗೌರವ ಇರುತ್ತದೆ, ಯಾವ ವೃತ್ತಿಯನ್ನು ಕಡೆಗಣಿಸುವಂತಿಲ್ಲ. ನಾವು ಕೈಗೊಳ್ಳುವ ವೃತ್ತಿಯ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಂದು ಹೇಳಿದರು.

ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ನ ಯೋಜನಾ ವ್ಯವಸ್ಥಾಪಕಿ ಸುನಂದ ಮಾತನಾಡಿ, ಸ್ವ ಉದ್ಯೋಗದಲ್ಲಿ ಆಸಕ್ತಿ ಇರುವ ಮಹಿಳೆಯರಿಗಾಗಿ ಹಲವು ಇಲಾಖೆಗಳು ಸಾಕಷ್ಟು ಅನುದಾನವನ್ನು ಮೀಸಲಿಟ್ಟಿದೆ . ಸರ್ಕಾರದ ಯೋಜನೆಗಳ ಬಗ್ಗೆ ಅರಿವನ್ನು ಹೊಂದುವ ಮನಸ್ಥಿತಿಯನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು. ಇದರಿಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಕಾಂತ್ ಮಾತನಾಡಿ, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗಾಗಿ ಇಲಾಖೆಯು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಕಾರ್ಮಿಕ ಕಾರ್ಡ್ನ್ನು ಪಡೆದುಕೊಂಡರೆ ವೈದ್ಯಕೀಯ ವಿಮೆ, ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ, ಮದುವೆಗೆ ಸಹಾಯಧನ, ಅಂಗವಿಕಲರಾದರೆ ಪರಿಹಾರ ಧನ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಅಸಂಘಟಿತ ಕಾರ್ಮಿಕರು ಪಡೆಯಲು ಸಾಧ್ಯ ಎಂದು ತಿಳಿಸಿದರು.

ಜಿ.ಪಂನ ಎನ್‌ಆರ್‌ಎಲ್‌ಎಂ ನ ಸಂಯೋಜಕ ಸುಂದರೇಶ್, ಯೋಜನಾ ವ್ಯವಸ್ಥಾಪಕ ಅಕ್ಬರ್, ಹೈದರಾಬಾದ್‌ನ ರಾಷ್ಟಿçÃಯ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪ್ರತಿನಿಧಿ ಸುಪ್ರಿತ್, ತರಬೇತಿ ಸಂಸ್ಥೆಯ ನಿರ್ದೇಶಕ ಎಂ.ಬಾಲಾಜಿ. ಬಿ.ರಮಾಕಾಂತ್ ಯಾದವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net