ಸ್ಲಂ ಜನರ ಪ್ರಣಾಳಿಕೆ ಕೈಪಿಡಿ ಬಿಡುಗಡೆ

slum.jpg
Published on

ದಾವಣಗೆರೆ: ಆಡಳಿತಾರೂಢ ಸರ್ಕಾರಗಳು ಶ್ರೀಮಂತರ ಓಲೈಕೆಗೆ ನಿಂತಿದ್ದು, ಅವರ ಸಿರಿವಂತಿಕೆಯನ್ನು ಮತ್ತಷ್ಟು ಹೆಚ್ಚಿಸಲು ಪಣ ತೊಟ್ಟಂತಿದೆ ಎಂದು ಹಿರಿಯ ವಕೀಲ ಬಿ.ಎಂ.ಹನುಮಂತಪ್ಪ ಕಿಡಿ ಕಾರಿದರು.

ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಸಹಯೋಗದಲ್ಲಿ ಇಲ್ಲಿನ ರೋಟರಿ ಬಾಲಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತ್ಯುತ್ಸವ ಸಂದರ್ಭದಲ್ಲಿ, ಕೊಳೆಗೇರಿ ಜನರ ಪ್ರಣಾಳಿಕೆಯ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.

ಚುನಾವಣೆ ಬಂದಾಗ ಸ್ಲಂ ಜನ, ದಲಿತ, ಬಡವರನ್ನು ನೆನಪಿಸಿಕೊಳ್ಳುವ ರಾಜಕೀಯ ಪಕ್ಷಗಳು ಸೌಲಭ್ಯ ಕೊಡುವಾಗ ಮರೆತುಬಿಡುತ್ತಿವೆ.

ಕೊಳಚೆಯಲ್ಲಿ ಹುಟ್ಟಿ, ಬೆಳೆದು ಅಲ್ಲಿಯೇ ಸಾಯುವ ನಾವು ಚುನಾವಣೆ ವೇಳೆ ತಲೆ ತಗ್ಗಿಸಿ ಮತದಾನ ಮಾಡುವ ಜತೆಗೆ ನಮಗೆ ದೊರೆಯಬೇಕಾದ ಹಕ್ಕುಗಳನ್ನು ತಲೆ ಎತ್ತಿ ಕೇಳುವ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕೆಂದರು.

ಬಡವರ ಕೂಗು, ಗೋಳು ಸರ್ಕಾರಕ್ಕೆ ಕೇಳುವುದಿಲ್ಲ. ಬದಲಾಗಿ ಬೆರಳೆಣಿಕೆಯ ಶ್ರೀಮಂತರ ಮಾತು ಕೇಳುತ್ತದೆ. ಹೀಗಾಗಿ ನಮ್ಮ ಧ್ವನಿ ಸರ್ಕಾರಕ್ಕೆ ತಲುಪಬೇಕಾದರೆ ನಮ್ಮಲ್ಲಿ ಸಾವಿರಾರು ನಾಯಕರು ಹುಟ್ಟಬೇಕು. ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯುವ ಛಲ ಬರಬೇಕು ಎಂದು ಆಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಕೀಲ ಎಲ್.ಎಚ್.ಅರುಣಕುಮಾರ್, ಇಂದಿನ ದಿನದಲ್ಲಿ ಬಹುತೇಕ ಸಂಘಟನೆಗಳು ರಾಜಕೀಯ ಪ್ರೇರಿತವಾಗಿವೆ. ಜನರ ನೋವಿಗೆ ದನಿಯಾಗುತ್ತಿಲ್ಲ. ರಾಜಕೀಯ ಪಕ್ಷಗಳ ತೆಕ್ಕೆಗೆ ಸೇರುವ ಸಂಘಟನೆಗಳು ಬೇಗನೇ ಅಂತ್ಯ ಕಾಣುತ್ತವೆ. ಸ್ಲಂ ಜನರಿಗಾಗಿ ಕೆಲಸ ಮಾಡುತ್ತಿರುವ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಕೆಲಸ ಗಮನಾರ್ಹವಾಗಿದೆ ಎಂದರು.

ಸ್ವಾತಂತ್ರ್ಯ ಗಳಿಸಿ 75 ವರ್ಷ ಕಳೆದರೂ ಜಾತಿ, ಧರ್ಮದ ಆಧಾರದ ಮೇಲೆ ನೋಡುವ ವ್ಯವಸ್ಥೆ ಇದೆ. ಇಂದಿಗೂ ಸಹ ಅಸ್ಪಶ್ಯತೆ, ಅಸಮಾನತೆ ಜೀವಂತವಿದೆ. ಸಂವಿಧಾನದ ಮೂಲ ಆಧಾರ ಸ್ತಂಭಗಳನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಬಲಿಷ್ಠ ಸಂವಿಧಾನ ಇರುವುದರಿಂದಲೇ ದೇಶದಲ್ಲಿ ಪ್ರಜಾಪ್ರಭುತ್ವ ನಿರಂತರವಾಗಿ ಇದೆ ಎಂದರು.

ಕಾರ್ಯಕ್ರಮದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ದಾವಣಗೆರೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ಎಚ್.ರೇಣುಕಾ ಯಲ್ಲಮ್ಮ, ಗೌರವಾಧ್ಯಕ್ಷ ಎಂ.ಶಬ್ಬೀರ್ ಸಾಬ್, ಮಂಜುಳಾ, ಬಾಲಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net