

ಮೈಸೂರು: ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ನಗರದಲ್ಲಿ ಪ್ರತ್ಯೇಕ ಕಡೆ ವಾಕಥಾನ್ ನಡೆಸುವ ಮೂಲಕ ವನಿತೆಯರು ಗಮನ ಸೆಳೆದರು.
ಇನ್ನರ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ನ 3ನೇ ವಾರ್ಷಿಕೋತ್ಸವದ ಪ್ರಯುಕ್ತ ಜರುಗಿದ ಸೀರೆ ನಡಿಗೆ(ಸ್ಯಾರಿ ವಾಕಥಾನ್)ದಲ್ಲಿ ವಿವಿಧ ವಿನ್ಯಾಸದ ಸೀರೆ ಧರಿಸಿದ 18 ರಿಂದ 70 ವರ್ಷದ ವರೆಗಿನ ಮಹಿಳೆಯರು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.
ಪುರಭವನ ಆವರಣದಿಂದ ಆರಂಭವಾದ ವಾಕಥಾನ್ ಶ್ರೀಹರ್ಷ ರಸ್ತೆ, ಬಿ.ಎನ್.ರಸ್ತೆ, ಮಲೆ ಮಹದೇಶ್ವರ (ಛತ್ರಿಮರದ ರಸ್ತೆ), ಹೇಮಚಂದ್ರ ವೃತ್ತ, ಕುಪ್ಪಣ್ಣ ಉದ್ಯಾನ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣ ಮೂಲಕ ಪುರಭವನ ಬಳಿ ಕೊನೆಗೊಂಡಿತು.
ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲೆ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿ, ವಿಶ್ವ ಮಹಿಳಾ ದಿನದ ಅಂಗವಾಗಿ ಸ್ಯಾರಿ ವಾಕ್‌ಥಾನ್ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ. ಈ ಹಿನ್ನೆಲೆಯಲ್ಲಿ ಯುವತಿಯರು ಮತ್ತು ಮಹಿಳೆಯರು ಸೀರೆ ಧರಿಸುವುದಕ್ಕೆ ಕಾರ್ಯಕ್ರಮ ಪ್ರೇರಣೆಯಾಗಲಿದೆ. ಜತೆಗೆ ಅರಿವು ಮೂಡಿಸಲಿದೆ ಎಂದರು.
ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಸಕ್ರಿಯವಾಗಿ ಕೆಲಸ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಇನ್ನಷ್ಟು ಏಳಿಗೆ ಸಾಧಿಸುವುದರೊಂದಿಗೆ ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ಸಂಸ್ಥೆಯ ಅಧ್ಯಕ್ಷೆ ಕವಿತಾ ವಿನೋದ್ ಮಾತನಾಡಿ, ಕರೊನಾ ಲಾಕ್‌ಡೌನ್ ಬಳಿಕ ಇದೊಂದು ಮಹಿಳೆಯರಿಗೆ ಚೈತನ್ಯ ತುಂಬುವ ಕಾರ್ಯಕ್ರಮವಾಗಿದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮೀ ಅರುಣ್, ಸಂಯೋಜಕಿ ಅನಿತಾ ಸುರೇಶ್ ಇನ್ನಿತರರಿದ್ದರು.
ವಿಜೇತರ ಪಟ್ಟಿ: ಸ್ಪರ್ಧೆಯಲ್ಲಿ 50 ವರ್ಷದೊಳಗಿನ ವಿಭಾಗದಲ್ಲಿ ಶುಭಾರೈ (ಪ್ರ), ವಿ.ಲಲಿತಾ (ದ್ವಿ) ರಂಜಿತಾ (ತೃ) ರೇವತಿ ಸಮಾಧಾನಕರ ಬಹುಮಾನ ಪಡೆದರು. 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಡಾ.ಬಿ.ಮಲ್ಲಿಕಾ (ಪ್ರ), ಆಶಾ ಎಸ್.ರಾವ್ (ದ್ವಿ) ಎಂ.ಎನ್.ಪ್ರೇಮಾ(ತೃ) ನಿರ್ಮಲಾ ಪ್ರಭು ಹಾಗೂ ಕುಸುಮಾ ಮೂರ್ತಿ ಸಮಾಧಾನಕರ ಬಹುಮಾನ ಪಡೆದರು. ಲಕ್ಕಿ ಲೇಡಿ ಬಹುಮಾನಕ್ಕೆ ಭಾಜನರಾದ ಟಿ.ಎಸ್.ಪೂರ್ಣಿಮಾ ಅವರಿಗೆ 5 ಸಾವಿರ ರೂ. ವೋಚರ್ ನೀಡಲಾಯಿತು.