ಸ್ಯಾಂಟ್ರೋ ರವಿಯಿಂದ ದಲಿತ ಯುವತಿ ಮೇಲೆ ಅತ್ಯಾಚಾರ ಆರೋಪ

Crime
Published on

ಮೈಸೂರು: ದಲಿತ ಯುವತಿಯೊಬ್ಬಳಿಗೆ ಕೆಲಸ ನೀಡುವ ಭರವಸೆ ನೀಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಬಲವಂತವಾಗಿ ವಿವಾಹ ವಾಗಿ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಬಿಇ ಮೆಕಾನಿಕಲ್ ಇಂಜಿನಿಯರ್ ಪದವಿ ಪಡೆದ ದಲಿತ ಯುವತಿಯೊಬ್ಬಳು ಪತ್ರಿಕೆಯೊಂದರಲ್ಲಿ 25-02-2019ರಲ್ಲಿ ಪ್ರಕಟವಾದ ಉದ್ಯೋಗಕ್ಕೆ ಸಂಬಂಧಿಸಿದ ಜಾಹೀರಾತನ್ನು ನೋಡಿ 2-3-2019 ರಂದು ವಿಜಯನಗರದಲ್ಲಿರುವ ಸ್ಯಾಂಟ್ರೋ ರವಿ ನಿವಾಸಕ್ಕೆ ಸಂದರ್ಶನಕ್ಕೆ ತೆರಳಿದ್ದರು. ಸಂದರ್ಶನ ನಡೆಸಿದ ಸ್ಯಾಂಟ್ರೋ ರವಿ ನೀವು ಆಯ್ಕೆಗೊಂಡಿದ್ದೀರ ಕೆಲಸಕ್ಕೆ ಬನ್ನಿ ಎಂದು ತಿಳಿಸಿದ. ಆತನ ಮಾತು ನಂಬಿ 7-3-2019 ರಂದು ಕೆಲಸಕ್ಕೆ ಹೋದ ಯುವತಿಗೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ನಡೆಸಿ ಆಕೆಯ ಬೆತ್ತಲೆ ಚಿತ್ರಗಳನ್ನು ಸೆರೆ ಹಿಡಿದು ಬ್ಲಾೃಕ್‌ಮೇಲ್ ಮಾಡಿದ್ದಾನೆ. ಇದೀಗ ಒಡನಾಡಿ ಸೇವಾಸಂಸ್ಥೆಯ ಆಶ್ರಯದಲ್ಲಿರುವ ಯುವತಿಯು ಸ್ಯಾಂಟ್ರೋ ರವಿ ವಿರುದ್ಧ ದೂರು ದಾಖಲಿಸಿದ್ದಾರೆ.

ಜೀವ ಬೆದರಿಕೆ, ಬಲವಂತದ ವಿವಾಹ:
ಅತ್ಯಾಚಾರದ ವಿಚಾರದ ಕುರಿತು ಪೊಲೀಸರಿಗೆ ತಿಳಿಸಿದರೆ ಹತ್ಯೆ ಮಾಡಲಾಗುವುದು ಎಂದು ಸ್ಯಾಂಟ್ರೋ ರವಿ ಯುವತಿಗೆ ಜೀವ ಬೆದರಿಕೆಯೊಡ್ಡಿದ. ಆ ನಂತರ ಆಕೆಗೆ ಬೆದರಿಕೆಯೊಡ್ಡಿ ಬಲವಂತವಾಗಿ ವಿವಾಹವಾದ. ವಿವಾಹವಾದ ನಂತರ ಒಂದು ದಿನ ಆಕೆ ತವರು ಮನೆಗೆ ತೆರಳಿದ್ದರು. ಆ ಸಂದರ್ಭ ಆಕೆಯ ಮನೆಗೆ ತೆರಳಿದ ಸ್ಯಾಂಟ್ರೋ ರವಿ ಆಕೆ ಹಾಗೂ ಆಕೆಯ ತಂದೆಗೆ ಜಾತಿ ನಿಂದನೆ ಮಾಡಿ ಆಕೆಯ ಮೇಲೆ ಹಲ್ಲೆ ನಡೆಸಿದ.

ಈ ಬೆಳವಣಿಗೆಯ ನಂತರ ಸ್ಯಾಂಟ್ರೋ ರವಿ ಆಕೆಯನ್ನು ವಿಜಯನಗರ ಮನೆಯಿಂದ ಓಡಿಸಿದ. ಕೆಲವು ದಿನಗಳ ನಂತರ ಹೋಟೆಲ್‌ಗೆ ಕರೆಯಿಸಿಕೊಂಡು ಅತ್ಯಾಚಾರ ನಡೆಸಿದ. ಇದಾದ ನಂತರ ಕುವೆಂಪುನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ 2020 ಮಾರ್ಚ್ ತಿಂಗಳಿನಿಂದ ಒಟ್ಟಿಗೆ ಜೀವನ ನಡೆಸಲು ಪ್ರಾರಂಭಿಸಿದರು. ಆ ಸಂದರ್ಭ ವರದಕ್ಷಿಣೆ ಕಿರುಕುಳ ನೀಡುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾನೆ. ದೌರ್ಜನ್ಯದ ನಂತರವೂ ಇಬ್ಬರು 22-11-2021 ರಿಂದ ಬೆಂಗಳೂರಿನಲ್ಲಿ ವಾಸ ಮಾಡಲು ತೊಡಗಿದರು. ಆದರೆ, ಸ್ಯಾಂಟ್ರೋ ರವಿ ದೌರ್ಜನ್ಯ ನಿರಂತರವಾಗಿ ಮುಂದುವರೆದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಯುವತಿ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

‘ಸ್ಯಾಂಟ್ರೋ ರವಿಗೆ ಲೈಂಗಿಕ ಸೋಂಕು ಇತ್ತು. ಆದರೆ, ಆ ವಿಚಾರವನ್ನು ಮರೆಮಾಚಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೆ ಬಲವಂತವಾಗಿ ನನಗೆ ಗರ್ಭಪಾತ ಮಾಡಿಸಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಯುವತಿ ಒತ್ತಾಯಿಸಿದ್ದಾಳೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net