

ಹುಬ್ಬಳ್ಳಿ: ಕಾಂಗ್ರೆಸ್ ಕಾಲದಲ್ಲೇ ಸ್ಯಾಂಟ್ರೋ ರವಿ ಜೈಲಿನಿಂದ ಹೊರಬಂದಿದ್ದಾನೆ. ಆತನಿಗೆ 20 ವರ್ಷದ ಇತಿಹಾಸವಿದೆ. ಈಗಾಗಲೇ ತನಿಖೆ ನಡೆದಿದ್ದು, ಆತನ ಎಲ್ಲ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ಯಾರ ಜತೆ ನಂಟು ಹೊಂದಿದ್ದ, ಆತನ ಹಿನ್ನೆಲೆ ಏನು ಎಂಬುದು ಗೊತ್ತಾಗಿದೆ ಎಂದರು.
ಪಂಚಮಸಾಲಿ ಮೀಸಲಾತಿ ಸಂವಿಧಾನ ಬದ್ಧವಾಗಬೇಕು. ಹಿಂದುಳಿದ ವರ್ಗಗಳ ಆಯೋಗದ ವರದಿಯೂ ಮುಖ್ಯ. ಹೀಗಾಗಿ ವರದಿಗಾಗಿ ಕಾಯುತ್ತಿದ್ದೇವೆ ಎಂದರು.
ಮಹದಾಯಿ ವಿಷಯದಲ್ಲಿ ಅರಣ್ಯ ಮತ್ತು ಪರಿಸರ ಸಚಿವಾಲಯ ಸ್ಪಷ್ಟನೆ ಕೇಳುವುದು ಸಾಮಾನ್ಯ ಪ್ರಕ್ರಿಯೆ. ಈ ಹಿಂದೆಯೂ ಸಾಕಷ್ಟು ವಿಚಾರದಲ್ಲಿ ಸ್ಪಷ್ಟನೆ ಕೇಳಿದ್ದಾರೆ. ಸಮರ್ಥವಾಗಿ ಉತ್ತರ ನೀಡುತ್ತೇವೆ ಎಂದರು.
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದು ಅವರ ವೈಯಕ್ತಿಕ ವಿಷಯ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಎಲ್ಲ ಕಡೆ ನಿಲ್ಲಲು ಅವರು ಸ್ವತಂತ್ರರು. ಆದರೆ, ತೀಮಾನವನ್ನು ಕೋಲಾರದ ಜನತೆ ಮಾಡುತ್ತಾರೆ ಎಂದು ಹೇಳಿದರು.
ಜ. 12ರಂದು ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸಿ, ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸುವರು. 28 ರಾಜ್ಯಗಳಿಂದ ಯುವ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಎಲ್ಲ ಸಿದ್ಧತೆ ಮಾಡಲಾಗಿದೆ ಎಂದರು.