ಸ್ಯಾಂಟ್ರೋ ರವಿ ಬಂಧನಕ್ಕೆ ಆಗ್ರಹಿಸಿ ದಸಂಸ ಪ್ರತಿಭಟನೆ

11
Published on

ಮೈಸೂರು: ಅನೇಕ ಮಹಿಳೆಯರಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.


ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ದಸಂಸ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಘೋಷಣೆ ಕೂಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ವಿಜಯನಗರ ಪೊಲೀಸ್ ಠಾಣೆಯಲ್ಲಿ ದಲಿತ ಯುವತಿಯ ದೂರಿನ ಮೇರೆಗೆ ವರದಕ್ಷಿಣೆ ನಿಷೇಧ ಕಾಯ್ದೆ, ಪರಿಶಿಷ್ಟರ ದೌರ್ಜನ್ಯ ನಿಷೇಧ ಕಾಯ್ದೆ, ಲೈಂಗಿಕ ಕಿರುಕುಳ, ಅತ್ಯಾಚಾರ, ವಂಚನೆ ಪ್ರಕರಣಗಳು ದಾಖಲಾಗಿ 12 ದಿನ ಕಳೆದರೂ ಆರೋಪಿಯನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಕಾರ್ಯವೈಖರಿ, ಅನೈತಿಕ ಚಟುವಟಿಕೆಗಳು ಅಸಹಾಯಕ ಸಮುದಾಯವನ್ನು ದಿಗಿಲುಗೊಳಿಸಿದೆ. ಪ್ರಜಾಪ್ರಭುತ್ವದ ಮೌಲ್ಯ ಕುರಿತು ಚರ್ಚಿಸಿ ಅನುಷ್ಠಾನಗೊಳಿಸಬೇಕಿದ್ದ ವಿಧಾನಸೌಧವು ತನ್ನ ಪಾವಿತ್ರೃ ಕಳೆದುಕೊಂಡಿದ್ದು, ಗೂಂಡಾಗಳು, ದಲ್ಲಾಳಿಗಳು, ವೇಶ್ಯಾವಾಟಿಕೆಯವರು, ವ್ಯವಹಾರ ನಡೆಸುವ ಕೇಂದ್ರವಾಗಿದೆ ಎಂದು ಆರೋಪಿಸಿದರು.


ಇಂತಹ ಅನೈತಿಕ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಬೇಕು. ಇದರೊಂದಿಗೆ ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಿ ರಾಜ್ಯದ ಜನತೆಗೆ ಭರವಸೆ ಮೂಡಿಸಬೇಕು ಎಂದು ಆಗ್ರಹಿಸಿದರು.


ಆಡಳಿತ ವ್ಯವಸ್ಥೆಯಲ್ಲಿನ ಬಹುಪಾಲು ಐಎಎಸ್, ಐಪಿಎಸ್, ಹಿರಿಯ ಅಧಿಕಾರಿಗಳು, ಮಂತ್ರಿಗಳು ಸ್ಯಾಂಟ್ರೋ ರವಿಯಂತಹ ಆರೋಪಿಯೊಂದಿಗೆ ಶಾಮೀಲಾಗಿದ್ದಾರೆ. ಸರ್ಕಾರಿ ಅತಿಥಿಗೃಹವನ್ನೇ ಕಚೇರಿ ಮಾಡಿಕೊಂಡು ಪರ್ಯಾಯ ಆಡಳಿತ ನಡೆಸಿರುವ ಇಂತಹ ಕ್ರಿಮಿನಲ್‌ಗಳಿಂದ ಇನ್ನೆಷ್ಟು ಅಮಾಯಕ ಹೆಣ್ಣುಮಕ್ಕಳ ಕಣ್ಣೀರಿನ ಕಥೆಗಳು ಸೇರಿವೆ ಎಂಬುದನ್ನು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು.


ನಾಗರಿಕ ಸಮಾಜ ನಾಚಿ ತಲೆತಗ್ಗಿಸುವ ಈ ದಂಧೆಯಲ್ಲಿ ಭಾಗಿಯಾಗಿ ಈ ರಾಜ್ಯವನ್ನು ಅಧೋಗತಿಗೆ ಕೊಂಡೊಯ್ದ ಎಲ್ಲರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ದಸಂಸ ಮುಖಂಡರಾದ ಬೆಟ್ಟಯ್ಯ ಕೋಟೆ, ಚೋರನಹಳ್ಳಿ ಶಿವಣ್ಣ, ಶಂಭುಲಿಂಗಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಹೆಗ್ಗನೂರು ನಿಂಗರಾಜು, ಕೆ.ಎಕೆ.ಜಗದೀಶ್, ಆಲಗೂಡು ಶಿವಕುಮಾರ್, ಮಣಿಯ್ಯ ಕೆ.ಬುಗತಗಳ್ಳಿ ಇತರರು ಇದ್ದರು.

ನ್ಯಾಯಮೂರ್ತಿ ಸಮ್ಮುಖದಲ್ಲಿ ತನಿಖೆ ಆಗಲಿ
ಇದು ಸಾಮಾನ್ಯ ಪ್ರಕರಣವಲ್ಲ. ಸಚಿವರು, ಐಎಎಸ್, ಐಪಿಎಸ್ ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದಾರೆ. ನೂರಾರು ಹೆಣ್ಣು ಮಕ್ಕಳು ಬಲಿಪಶುವಾಗಿದ್ದಾರೆ. ಆದ್ದರಿಂದ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಸಮ್ಮುಖದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಒಡನಾಡಿ ಸೇವಾ ಸಂಸ್ಥೆಯ ಅಧ್ಯಕ್ಷ ಸ್ಟಾೃನ್ಲಿ-ಪರಶು ಆಗ್ರಹಿಸಿದರು.


ಪ್ರಭಾವಿಗಳು ಭಾಗಿಯಾಗಿರುವುದರಿಂದ ಪೊಲೀಸ್ ತನಿಖೆಯಿಂದ ನ್ಯಾಯ ಸಿಗುವುದಿಲ್ಲ. ಆದ್ದರಿಂದ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಆರೋಪಿ ಆಸ್ತಿಯನ್ನು ಜಪ್ತಿ ಮಾಡಿ ಸಂತ್ರಸ್ತೆಗೆ ಆರ್ಥಿಕ ನೆರವು ಮತ್ತು ಸಾಮಾಜಿಕ ಭದ್ರತೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net