

ಚಾಮರಾಜನಗರ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಕಾರ್ಡ್ ಮತ್ತು ಡಿಜಿಟಲ್ ಮೀಟರ್ ಅಳವಡಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರತಿಕೃತಿ ಮೆರವಣಿಗೆ ನಡೆಸಿದರು. ಅಲ್ಲಿಂದ ಹೊರಟು ಶ್ರೀಭುವನೇಶ್ವರಿ ವೃತ್ತದಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಸೆಸ್ಕ್ ಕಚೇರಿ ಮುಂಭಾಗಕ್ಕೆ ತೆರಳಿ ಕೆಲಕಾಲ ಧರಣಿ ನಡೆಸಿದರು.
ಈ ವೇಳೆ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಮಾತನಾಡಿ, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಕಾರ್ಡ್ ಮತ್ತು ಡಿಜಿಟಲ್ ಮೀಟರ್ ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಅತ್ಯಂತ ಖಂಡನೀಯ. ಈ ನಿಟ್ಟಿನಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ರಾಜ್ಯ ಸರ್ಕಾರ 10 ಸಾವಿರ ರೂ, ಠೇವಣಿ ನಿಗಧಿಪಡಿಸಿರುವುದನ್ನು ಹಿಂಪಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಮಾಡಿರುವ ಯತ್ನವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರೈತರಿಗೆ ವಿದ್ಯುತ್ ಪರಿಕರಗಳನ್ನು ಅಕ್ರಮ ಸಕ್ರಮ ಅಡಿಯಲ್ಲಿ ಈ ಹಿಂದೆ ನೀಡುತ್ತಿದ್ದಂತೆ, ಉಚಿತ ವಿದ್ಯುತ್ ನೀಡಬೇಕು. ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ್ ಜೋಡಣೆ ಮಾಡುವುದನ್ನು ನಿಲ್ಲಿಸಬೇಕು. ಜಮೀನಿನಲ್ಲಿ ವಾಸವಾಗಿರುವ ರೈತರಿಗೆ, ಹೈನುಗಾರಿಕೆ ಮಾಡುವವರಿಗೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಶೀಘ್ರ ಯೋಜನೆಯಡಿಯಲ್ಲಿ ಟಿಸಿಗಳನ್ನು ಮಾತ್ರ ನೀಡಲಿದ್ದು ಉಳಿದ ಕಂಬ ಮತ್ತು ವೈರ್‌ಗಳನ್ನು ರೈತರು ಸ್ವಂತ ಖರ್ಚಿನಿಂದ ಮಾಡಿಸಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರವೇ ಉಚಿತವಾಗಿ ಟಿಸಿಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಕುಂದಕೆರೆ ಸಂಪತ್ತು, ಹಿರಿಕಾಟಿ ಚಿಕ್ಕಣ್ಣ, ನಾಗರಾಜು , ಮಹೇಶ್, ಕಲ್ಪುರ ಪ್ರಕಾಶ್, ಮಾಧು, ಋಷಿ, ಲಿಂಗಸ್ವಾಮಿ, ರವಿ, ಗೋವಿಂದ, ಮಹದೇವಮೂರ್ತಿ, ಸುರೇಶ್, ಶಿವಪಾದ ಹಾಗೂ ಇತರರು ಭಾಗವಹಿಸಿದ್ದರು.
ಪೊಲೀಸರೊಂದಿಗೆ ಮಾತಿನ ಚಕಾಮಕಿ:
ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ರೈತರು ಜಮಾಯಿಸಿ, ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರತಿಕೃತಿಯನ್ನು ಮೆರವಣಿಗೆ ಮಾಡಲು ಮುಂದಾದಾಗ ಪೊಲೀಸರು ಪ್ರತಿಕೃತಿ ಮೆರವಣಿಗೆ ಮಾಡದಂತೆ ತಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಾಮಕಿ ನಡೆಯಿತು. ಶ್ರೀಭುವನೇಶ್ವರಿ ವೃತ್ತದ ಬಳಿ ಪ್ರತಿಕೃತಿ ದಹನಕ್ಕೆ ರೈತರು ಪ್ರಯತ್ನಿಸಿದರು. ಆದರೇ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಆದರೂ ಪ್ರತಿಕೃತಿ ಮೆರವಣಿಗೆ ನಡೆಸಿದರು. ಸೆಸ್ಕ್ ಕಚೇರಿ ಮುಂಭಾಗ ಪೊಲೀಸರು ಪ್ರತಿಕೃತಿಯನ್ನು ವಶಕ್ಕೆ ಪಡೆದರು. ಬಳಿಕ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದರು. ಪೊಲೀಸರು ಮುಖ್ಯದ್ವಾರದಲ್ಲೇ ರೈತರನ್ನು ತಡೆದರು. ಬಳಿಕ ಕೆಲಕಾಲ ಅಲ್ಲೇ ಪ್ರತಿಭಟನೆ ನಡೆಸಿದರು.