ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್: ಮೈಸೂರಿನ ಅಮೃತವಿಶ್ವವಿದ್ಯಾಪೀಠಕ್ಕೆ ಬಹುಮಾನ

21
Published on

ಮೈಸೂರು: ನಗರದ ಅಮೃತ ವಿಶ್ವವಿದ್ಯಾಪೀಠಂ ಕಾಲೇಜಿನ ಇಂಟಿಗ್ರೇಟೆಡ್ ಎಂಸಿಎ ತಂಡವು ಇತ್ತೀಚಿಗೆ ಒಡಿಶಾದ ಜಿಐಇಟಿ ವಿಶ್ವವಿದ್ಯಾಲಯದಲ್ಲಿ ನಡೆದ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2022’ರ ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನದೊಂದಿಗೆ 1 ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದೆ.

ಈ ಪ್ಯಾನ್ ಇಂಡಿಯಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ವಿಭಾ ಹರೀಶ್ (ಟೀಂ ಲೀಡರ್), ಡಿ.ಪದ್ಮಜಾ ಪ್ರೇಕ್ಷಾ, ಪಿ.ಎಸ್. ಅಭೀಜ್ಞಾ, ಪ್ರಣವ್ ಜೀವನ್, ಅಪೇಕ್ಷಾ ರಾವ್ ಹಾಗೂ ಆರ್. ಸುರಭಿ ಅವರನ್ನೊಳಗೊಂಡ ಜೀನಿಯಸ್ ನೋಬ್ಸ್ ಆ್ಯಂಡ್ ಎನ್‌ಟಿಎ ತಂಡವು ಪ್ರಶಸ್ತಿ ಪಡೆದುಕೊಂಡಿದೆ.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಇನೋವೇಶನ್ ಸೆಲ್ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (ಎಐಸಿಟಿಇ) ವತಿಯಿಂದ ರಾಷ್ಟ್ರಾದ್ಯಂತ ನಡೆದ ವಿನೂತನ ಕಾರ್ಯಕ್ರಮವಾಗಿದೆ. ಇಲ್ಲಿ ವಿದ್ಯಾರ್ಥಿಗಳು ನಮ್ಮ ದೇಶ ಎದುರಿಸುತ್ತಿರುವ ವಿವಿಧ ಸವಾಲುಗಳು, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ಪರಿಹಾರ ನೀಡುವ ಪ್ರಯತ್ನ ಮಾಡಿದ್ದಾರೆ. ದೇಶದ ಪ್ರಗತಿಗಾಗಿ ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನ ಮಾದರಿ ಯೋಜನೆ ರೂಪಿಸಿ ಪ್ರಸ್ತುತಪಡಿಸಿದ್ದಾರೆ.

ದೇಶದ ಯುವ ಮನಸ್ಸುಗಳೊಂದಿಗೆ ಸಂವಹನ ನಡೆಸಲು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಲವಾರು ತಂಡಗಳೊಂದಿಗೆ ಸಹಯೋಗ ಪಡೆಯಲು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಒಂದು ಉತ್ತಮ ವೇದಿಕೆಯಾಗಿದೆ. ರಾಷ್ಟ್ರ ಮಟ್ಟದ ಗ್ರಾೃಂಡ್ ಫಿನಾಲೆಯಲ್ಲಿ ಭಾಗವಹಿಸಲು ಅಮೃತ ವಿಶ್ವ ವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ನಿಂದ ಒಟ್ಟು ಮೂರು ತಂಡಗಳು ಆಯ್ಕೆಯಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net