ಸ್ಮಾರ್ಟ್ ಆಸ್ತಿ ನಿರ್ವಹಣೆಗೆ 2 ಸಮಿತಿ

smart city
Published on

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸೃಷ್ಟಿಯಾಗಿರುವ (ಮುಂದೆ ಪೂರ್ಣಗೊಳ್ಳಲಿರುವ) ಎಲ್ಲ ಆಸ್ತಿಗಳ ಸೂಕ್ತ ನಿರ್ವಹಣೆಗೆ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡ ಬಳಿಕವೂ ಗರಿಷ್ಠ 5 ವರ್ಷಗಳ ಕಾಲ ಗುತ್ತಿಗೆದಾರರೇ ಕಾರ್ಯಾಚರಣೆ ಹಾಗೂ ನಿರ್ವಹಣೆ (ಒ ಆಂಡ್ ಎಂ) ಜವಾಬ್ದಾರಿ ವಹಿಸಿಕೊಳ್ಳುವ ನಿಬಂಧನೆಗೆ ಒಳಪಟ್ಟಿದೆ. ಆದರೂ, ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೋ-ಇಲ್ಲವೋ ಎಂಬುದು ಕಾಲ ಕಾಲಕ್ಕೆ ಸ್ಮಾರ್ಟ್ ಸಿಟಿ ಮೇಲುಸ್ತುವಾರಿ ಹಾಗೂ ಕಾರ್ಯಕಾರಿ ಸಮಿತಿಗಳ ಪರಿಶೀಲನೆಗೆ ಒಳಪಡಲಿದೆ.

ಮೇಲುಸ್ತುವಾರಿ ಸಮಿತಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅಧ್ಯಕ್ಷರಾಗಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹ ಅಧ್ಯಕ್ಷರಾಗಿದ್ದಾರೆ. ಹುಬ್ಬಳ್ಳಿ- ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ ಬರುವ 4 ವಿಧಾನಸಭೆ ಕ್ಷೇತ್ರಗಳ ಶಾಸಕರು, ಹು-ಧಾ ಮಹಾನಗರ ಪಾಲಿಕೆ ಮೇಯರ್ (2 ವರ್ಷಗಳಿಂದ ಚುನಾವಣೆ ನಡೆದಿಲ್ಲ), ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ, ಪ್ರಾಧಿಕಾರದ ಆಯುಕ್ತರು ಸದಸ್ಯರಾಗಿದ್ದಾರೆ. ಕಾರ್ಯಕಾರಿ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ಪಾಲಿಕೆ ಆಯುಕ್ತ, ಪ್ರಾಧಿಕಾರದ ಆಯುಕ್ತ, ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್​ನ ಪ್ರಧಾನ ವ್ಯವಸ್ಥಾಪಕ, ಜಿಲ್ಲಾ ನಿರ್ವಿುತಿ ಕೇಂದ್ರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ, ಯುವಜನ ಸೇವಾ ಮತ್ತು ಕ್ರೀಡೆ ಇಲಾಖೆ ಸಹಾಯಕ ನಿರ್ದೇಶಕ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸದಸ್ಯರಾಗಿದ್ದಾರೆ. ಈ ಎರಡೂ ಸಮಿತಿಗಳಿಗೆ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.

ಪೂರ್ವ ನಿಗದಿಯಂತೆ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯ 5 ವರ್ಷಗಳ ಅವಧಿ 2022ರ ಮೇ ತಿಂಗಳಲ್ಲಿ ಕೊನೆಗೊಳ್ಳಲಿದೆ. ಬಳಿಕ 1 ವರ್ಷ ಅವಧಿ ವಿಸ್ತರಿಸುವುದು ಕೇಂದ್ರ ಸರ್ಕಾರದ ವಿವೇಚನೆಗೆ ಸೇರಿದೆ.

ಕಾರ್ಯನಿರ್ವಹಣೆ

ಎರಡೂ ಸಮಿತಿಗಳ ಕಾರ್ಯನಿರ್ವಹಣೆ ಭಿನ್ನವಾಗಿದೆ. ಮೇಲುಸ್ತುವಾರಿ ಸಮಿತಿಯು ಸಾರ್ವಜನಿಕರ ಅಭಿಪ್ರಾಯವನ್ನು ಪರಿಗಣಿಸಿ ಕಾರ್ಯಕಾರಿ ಸಮಿತಿಗೆ ಸಲಹೆ ನೀಡಲಿದೆ. ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಲವು ಕಾಮಗಾರಿಗಳು ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಸಮರ್ಪಿತಗೊಂಡಿವೆ. ಕೆಲವು ಪೂರ್ಣಗೊಂಡು ಉದ್ಘಾಟನೆಗೆ ಕಾಯುತ್ತಿವೆ. ಇವುಗಳ ಸೂಕ್ತ ನಿರ್ವಹಣೆ ಜತೆಗೆ ಸಾರ್ವಜನಿಕರಿಗೆ ಹೊರೆಯಾಗದಂತೆ ಮೇಲುಸ್ತುವಾರಿ ಸಮಿತಿಯ ಸಲಹೆ ಮೇರೆಗೆ ಕಾರ್ಯಕಾರಿ ಸಮಿತಿಯು ಶುಲ್ಕ ನಿಗದಿಪಡಿಸಲಿದೆ. ಉದಾಹರಣೆಗೆ ಫಜಲ್ ರ್ಪಾಂಗ್ ವ್ಯವಸ್ಥೆಯಲ್ಲಿ ವಾಹನಗಳ ನಿಲುಗಡೆಗೆ ಪ್ರತಿ ಗಂಟೆಗೆ, ಉಣಕಲ್, ತೋಳನಕೆರೆ, ಇಂದಿರಾ ಗಾಜಿನ ಮನೆ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ, ಪುಟಾಣಿ ರೈಲಿನಲ್ಲಿ ಓಡಾಟಕ್ಕೆ ಶುಲ್ಕ ನಿಗದಿಯಾಗಬೇಕು.

28 ಕಾಮಗಾರಿಗಳು ಪೂರ್ಣ

2017ರಲ್ಲಿ ಆರಂಭಗೊಂಡ ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ 28 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 42 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಉದ್ದೇಶಿತ 2 ಕಾಮಗಾರಿಗಳು ಟೆಂಡರ್ ಹಂತದಲ್ಲಿದೆ. ಮಾರ್ಚ್ 31ರವರೆಗೆ ಯೋಜನಾ ವೆಚ್ಚವಾಗಿ 202.48 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಯೋಜನೆಯಡಿ ಹಂಚಿಕೆಯಾಗಿರುವ 1 ಸಾವಿರ ಕೋಟಿ ರೂ. ಗಳಲ್ಲಿ ಕೇಂದ್ರ ಸರ್ಕಾರ 196 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 190 ಕೋಟಿ ರೂ. ಬಿಡುಗಡೆ ಮಾಡಿದೆ. ಇ-ಟಾಯ್ಲೆಟ್, ಲ್ಯಾಮಿಂಗ್ಟನ್ ಶಾಲೆ ಸ್ಮಾರ್ಟ್ ಸ್ಕೂಲ್, ಚಿಟಗುಪ್ಪಿ ಆಸ್ಪತ್ರೆ ಸ್ಮಾರ್ಟ್ ಹೆಲ್ತ್​ಕೇರ್ ವ್ಯವಸ್ಥೆ, ಪಾಲಿಕೆ ಒಡೆತನದ ಈಜುಗೊಳ ನವೀಕರಣ, ಫಜಲ್ ರ್ಪಾಂಗ್, ಇಂದಿರಾ ಗಾಜಿನ ಮನೆ ಸಂಗೀತ ಕಾರಂಜಿ, ಇವು ಪೂರ್ಣಗೊಂಡ ಪ್ರಮುಖ ಕಾಮಗಾರಿಗಳು.

ಸ್ಮಾರ್ಟ್ ಸಿಟಿ ಯೋಜನೆಯ ಆಸ್ತಿ ನಿರ್ವಹಣೆಗೆ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಒಪ್ಪಿಗೆ ಪಡೆಯಲಾಗಿದೆ. ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್​ನ ಆಡಳಿತ ಮಂಡಳಿಯ ಮುಂದಿನ ಸಭೆಯಲ್ಲಿ ಸಮಿತಿ ರಚನೆಯ ಪ್ರಸ್ತಾವನೆಯನ್ನು ಮಂಡಿಸಲಾಗುವುದು.| ಎಸ್.ಎಚ್. ನರೇಗಲ್ವಿಶೇಷಾಧಿಕಾರಿ, ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net