ಸ್ಮಾರಕ ಭವನ ಕಾಮಗಾರಿ ನನೆಗುದಿಗೆ

23-gdg-5
Published on

ಮೃತ್ಯುಂಜಯ ಕಲ್ಮಠ ಗದಗ
ನಗರದ ವೀರೇಶ್ವರ ಪುಣ್ಯಾಶ್ರಮದ ಬಳಿ ಲಿಂ. ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳ ಹೆಸರಿನಲ್ಲಿ ನಿರ್ವಿುಸಲಾಗುತ್ತಿರುವ ಸ್ಮಾರಕ ಭವನದ ಕಾಮಗಾರಿ ಹಣಕಾಸಿನ ಕೊರತೆಯಿಂದ ಕಳೆದ ಐದು ವರ್ಷಗಳಿಂದ ನನೆಗುದಿದೆ ಬಿದ್ದಿದೆ.
ನಾಡಿನ ಅಸಂಖ್ಯಾತ ಅಂಧರ ಬಾಳಿಗೆ ಬೆಳಕಾದ ಗವಾಯಿಗಳ ಸ್ಮಾರಕ ಭವನಕ್ಕೆ ಹೆಚ್ಚುವರಿ ಅನುದಾನ ನೀಡದಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಸರ್ಕಾರದ ನಿರ್ಲಕ್ಷ್ಯಕ್ಕೆ ಗವಾಯಿಗಳ ಶಿಷ್ಯಂದಿರು, ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರಿಗಾಗಿ ಜೀವನವನ್ನೇ ಸವೆಸಿ ಭಕ್ತರ ಹೃದಯದಲ್ಲಿ ಅಜರಾಮರವಾಗಿ ಉಳಿದಿರುವ ಗವಾಯಿಗಳ ಸೇವೆಯನ್ನು ಸರ್ಕಾರ ಗೌರವಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
26.5 ಗುಂಟೆ ಜಾಗ: ಎಪಿಎಂಸಿ ಯಾರ್ಡ್​ನಲ್ಲಿರುವ ವೀರೇಶ್ವರ ಪುಣ್ಯಾಶ್ರಮದ ಪಕ್ಕದಲ್ಲಿರುವ 26.5 ಗುಂಟೆ ಜಾಗದಲ್ಲಿ ಸ್ಮಾರಕ ಭವನ ನಿರ್ವಿುಸಲಾಗುತ್ತಿದೆ. 2010ರ ಸೆಪ್ಟೆಂಬರ್​ನಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಮಾರಕ ಭವನ ನಿರ್ವಣಕ್ಕೆ 5 ಕೋಟಿ ರೂ. ಅನುದಾನ ಘೋಷಿಸಿದರು. ನಂತರ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡ ಅವರು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಸ್ಮಾರಕ ಭವನ ನಿರ್ಮಾಣ ಕಾಮಗಾರಿಗೆ ಸಾಂಕೇತಿಕವಾಗಿ ಭೂಮಿಪೂಜೆ ನೆರವೇರಿಸಿದರು. ಕಳಕಪ್ಪ ಬಂಡಿ ಉಸ್ತುವಾರಿ ಮಂತ್ರಿಯಾದ ನಂತರ ಕಗ್ಗಂಟಾಗಿದ್ದ ಸ್ಮಾರಕ ಭವನ ನಿವೇಶನ ಸಮಸ್ಯೆ ಬಗೆಹರಿಸಿದರು. 2014ರಲ್ಲಿ ಅಂದಿನ ಸಚಿವ ಎಚ್.ಕೆ. ಪಾಟೀಲ ಅವರು ಕಾಮಗಾರಿಗೆ ಮತ್ತೊಮ್ಮೆ ಭೂಮಿಪೂಜೆ ನೆರವೇರಿಸಿದರು. ನಿಗದಿಯಂತೆ ಭವನ 2016ಕ್ಕೆ ಪೂರ್ಣಗೊಳ್ಳಬೇಕಿತ್ತು.
ಬೆಂಗಳೂರಿನಲ್ಲಿರುವ ಪೀಟಿಲು ಚೌಡಯ್ಯ ಮೆಮೋರಿಯಲ್ ಹಾಲ್ ಮಾದರಿಯಲ್ಲಿ ಭವನವನ್ನು ನಿರ್ವಿುಸಲಾಗುತ್ತಿದೆ. 2010ರಲ್ಲಿ ಸರ್ಕಾರ ನೀಡಿರುವ 5 ಕೋಟಿ ರೂಪಾಯಿ ಅನುದಾನವು ಕಾಮಗಾರಿಗೆ ಸಾಲುತ್ತಿಲ್ಲ. ಅಲ್ಲದೆ, 5 ಕೋಟಿ ರೂ. ಅನುದಾನದಲ್ಲಿ 1.24 ಕೋಟಿ ರೂ.ಗಳನ್ನು ಸರ್ಕಾರ ಇನ್ನೂ ಬಿಡುಗಡೆಗೊಳಿಸಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾಮಗಾರಿ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೊಂಡಿದೆ.
ಬಜೆಟ್​ನಲ್ಲಿ ನಿರೀಕ್ಷೆ: ಸ್ಮಾರಕ ಭವನಕ್ಕೆ ಹೆಚ್ಚುವರಿ 5 ಕೋಟಿ ರೂ. ಅಗತ್ಯವಿದೆ. ಹೀಗಾಗಿ ಒಟ್ಟು 6.24 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಕಳೆದ ವರ್ಷ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದ್ದು ಮುಂಬರುವ ಬಜೆಟ್​ನಲ್ಲಿ ಹೆಚ್ಚುವರಿ ಅನುದಾನ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಮಾರ್ಚ್ 3ರಂದು ಪುಟ್ಟರಾಜ ಕವಿ ಗವಾಯಿಗಳವರ ಜನ್ಮ ದಿನಾಚರಣೆ ಇದ್ದು, ಈ ವೇಳೆಗೆ ಸರ್ಕಾರ ಅನುದಾನ ಘೋಷಿಸಿ ಶುಭ ಸುದ್ದಿಯನ್ನು ನೀಡಬೇಕೆಂದು ಭಕ್ತರು ಆಗ್ರಹಿಸುತ್ತಿದ್ದಾರೆ.

ಪುಟ್ಟರಾಜ ಗವಾಯಿ ಸ್ಮಾರಕ ಭವನ ಕಾಮಗಾರಿಗೆ ಅನುದಾನದ ಕೊರತೆ ಉಂಟಾಗಿದೆ. ಹೀಗಾಗಿ ಹೆಚ್ಚುವರಿ ಅನುದಾನ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಹುಶಃ ಮುಂಬರುವ ದಿನಗಳಲ್ಲಿ ಅನುದಾನ ಲಭಿಸುವ ಸಾಧ್ಯತೆಗಳಿವೆ.| ವೀರಯ್ಯಸ್ವಾಮಿ, ಉಪನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗದಗಪಂಡಿತ ಪುಟ್ಟರಾಜ ಗವಾಯಿಗಳವರು ಅಂಧರಿಗೆ ಬದುಕು ಕಟ್ಟಿಕೊಟ್ಟ ಮಹಾನ್ ಚೇತನ. ಅಂಥ ಜಾತ್ಯತೀತ ಗುರುವಿನ ಸ್ಮಾರಕ ಭವನ ನಿರ್ಮಾಣ ಕಾರ್ಯಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು.| ಮಲ್ಲಪ್ಪ ಸವಡಿ, ಭಕ್ತ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net