

ಲಕ್ಷ್ಮೇಶ್ವರ: ತಾಲೂಕಿನ ಮಾಡಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಸ್ಮಶಾನ ಭೂಮಿಯಲ್ಲಿನ ಮಣ್ಣನ್ನು ಯಾರ ಭಯವೂ ಇಲ್ಲದೇ ಹಗಲೂ ರಾತ್ರಿ ದೋಚಲಾಗುತ್ತಿದೆ. ಮನಸೋ ಇಚ್ಛೇ ಎತ್ತುವಳಿ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಲಾಕ್ಡೌನ್ ಸಮಯವಾಗಿರುವುದರಿಂದ ಸಾರ್ವಜನಿಕರ ಓಡಾಟವೂ ಇಲ್ಲದಿರುವುದು ಮಣ್ಣು ಕಳ್ಳರಿಗೆ ವರವಾಗಿ ಪರಿಣಮಿಸಿದೆ.
ಗ್ರಾಮದ ಕೂಗಳತೆಯಲ್ಲಿರುವ ಸರ್ವೆ ನಂ. 2ರ ಸ್ಮಶಾನದ ಅಂಚಿನಲ್ಲಿ ಹಾದು ಹೋಗಿರುವ ಹಳ್ಳದ ಒಡಲಿನಲ್ಲಿರುವ ಮರಳು ಮತ್ತು ಮಣ್ಣನ್ನು ಪ್ರಭಾವಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಹಾಡಹಗಲೇ ಜೆಸಿಬಿ ಮೂಲಕ ಎತ್ತಿ ಮಾರಾಟ ಮಾಡುತ್ತಿದ್ದಾರೆ. ಸುಮಾರು 200 ಮೀಟರ್ ಉದ್ದ ಮತ್ತು 10-15 ಅಡಿ ಆಳದಲ್ಲಿ ಜೆಸಿಬಿ ಮೂಲಕ ಮಣ್ಣು ಮತ್ತು ಮರಳನ್ನು ತೆಗೆದು ಸಾವಿರಾರು ಟ್ರ್ಯಾಕ್ಟರ್ಗಳಲ್ಲಿ ಮಾರಾಟ ಮಾಡಿದ್ದಾರೆ. ಈ ಹಳ್ಳದ ಪಕ್ಕದಲ್ಲಿ ಕುಡಿಯುವ ನೀರಿನ ಕೆರೆ ಇದೆ. ಹಳ್ಳದಲ್ಲಿ ಆಳವಾದ ತಗ್ಗು ತೋಡಿರುವುದರಿಂದ ಈ ಕೆರೆಯ ನೀರು ಅರ್ಧದಷ್ಟು ಖಾಲಿಯಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂಬುದು ಗ್ರಾಮಸ್ಥರ ಅಳಲು. ಇಲ್ಲಿಗೆ ಮೇಯಲು, ನೀರು ಕುಡಿಯಲು ಬರುವ ದನಕರುಗಳು, ಈ ಮಾರ್ಗವಾಗಿ ಸಂಚರಿಸುವ ರೈತರು, ಶವ ಸಂಸ್ಕಾರಕ್ಕೆ ಬರುವ ಜನರ ಪ್ರಾಣಕ್ಕೆ ಈ ಆಳವಾದ ಕಂದಕಗಳು ಕುತ್ತು ತರುವಂತಿವೆ. ಮಳೆಗಾಲದಲ್ಲಿ ಕಂದಕದ ಸುತ್ತಲಿನ ಕಪ್ಪು ಮಣ್ಣು ಸಡಿಲಗೊಂಡರೆ ಕೆರೆಗೆ ಆಪತ್ತು ಬರುವ ಸಾಧ್ಯತೆಯೂ ಇದೆ.
ಕೆಲ ಪ್ರಭಾವಿಗಳು ಯಾರ ಭಯವೂ ಇಲ್ಲದೆ ತಮ್ಮ ಸ್ವಾರ್ಥಕ್ಕಾಗಿ ಅಕ್ರಮವಾಗಿ ಸ್ಮಶಾನ ಭೂಮಿ ಬಗೆಯುವ ವಿಷಯ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕಿದೆ. ಆದರೂ ಅವರು ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ಕುರಿತು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ತಹಸೀಲ್ದಾರರ ಗಮನಕ್ಕೆ ತರಲಾಗಿದೆ. ಆದರೆ, ಇದುವರೆಗೂ ಕ್ರಮ ಜರುಗಿಸಿಲ್ಲ. ಇದರಿಂದ ತಾಲೂಕು ಮಟ್ಟದ ಅಧಿಕಾರಿಗಳ ಕಾರ್ಯವೈಖರಿ ಗ್ರಾಮಸ್ಥರಿಗೆ ಅಸಮಾಧಾನ ತಂದಿದೆ. ಈ ಕುರಿತು ನಾವು ಜಿಲ್ಲಾಧಿಕಾರಿಗಳ ಗಮನಕ್ಕೂ ತರುತ್ತೇವೆ. ಜಿಲ್ಲಾಧಿಕಾರಿಗಳೇ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಈ ಕೃತ್ಯದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಭಾಗಿಯಾದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. | ವಿ.ವಿ. ಮತ್ತೂರ, ಪ್ರಕಾಶ ಬಳೂಟಗಿ ಗ್ರಾಪಂ ಸದಸ್ಯರು, ಮಾಡಳ್ಳಿ
ಈ ಕೂಡಲೇ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದು ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ ಮತ್ತು ಗ್ರಾಮ ಲೆಕ್ಕಾಧಿಕಾರಿ ಡಿ.ಎಲ್. ವಿಭೂತಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡುತ್ತೇನೆ ಮತ್ತು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸುತ್ತೇನೆ. | ಭ್ರಮರಾಂಬ ಗುಬ್ಬಿಶೆಟ್ಟಿ, ತಹಸೀಲ್ದಾರ್
EndFragment