ಸ್ಮಶಾನಕ್ಕೆ ಜಾಗ ಮಂಜೂರು ಕೋರಿ ಡಿಸಿಗೆ ಮನವಿ

24Rajesh3
Published on

ಚಾಮರಾಜನಗರ: ನಗರದ ವರದರಾಜಪುರ ಬೋವಿ ಜನಾಂಗಕ್ಕೆ ಸ್ಮಶಾನದ ಜಾಗವನ್ನು ಮಂಜೂರು ಮಾಡಿಕೊಡುವಂತೆ ಕೋರಿ ಸಮುದಾಯದ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಬೋವಿ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು. ನಮ್ಮ ಜನಾಂಗದವರು ಮರಣ ಹೊಂದಿದಾಗ ಚಾಮರಾಜನಗರದ ಸರ್ವೆ ನಂ.721 ರಲ್ಲಿ ಸುಮಾರು 40 ವರ್ಷಗಳಿಂದಲೂ ಶವಸಂಸ್ಕಾರ ಮಾಡಲಾಗುತ್ತಿತ್ತು. ಆದರೆ ಜ.21 ರಂದು ನಮ್ಮ ಜನಾಂಗದ ಮಹಿಳೆಯೊಬ್ಬರು ಮರಣ ಹೊಂದಿದಾಗ ಅಂತ್ಯಸಂಸ್ಕಾರ ಮಾಡಲು ಸ್ಮಶಾನಕ್ಕೆ ಹೋದಾಗ ದೇವಾಂಗ ಜನಾಂಗದವರು ರುದ್ರಭೂಮಿಯ ಗೇಟ್ ಹಾಕಿ ಸ್ಮಶಾನಕ್ಕೆ ಹೋಗದಂತೆ ಮಾಡಿದ್ದರು ಎಂದು ದೂರಿದರು.

ಸ್ಮಶಾನದ ಜಾಗವು 2 ಎಕರೆಗಿಂತ ಜಾಸ್ತಿ ಇದೆ. ಆದ್ದರಿಂದ ತಾವು ಸ್ಥಳ ಪರಿಶೀಲನೆ ಮಾಡಿ ನಮ್ಮ ಸಮುದಾಯದ ಸ್ಮಶಾನಕ್ಕೆ ಜಾಗವನ್ನು ಬಿಡಿಸಿಕೊಡಿ. ಇಲ್ಲವಾದಲ್ಲಿ ನಮಗೆ ಸ್ಮಶಾನಕ್ಕೆ ಜಾಗವನ್ನು ಮಂಜೂರು ಮಾಡಿಕೊಟ್ಟು ಶವಸಂಸ್ಕಾರ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು. ಬಹುಜನ ಸಮಾಜ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮಹೇಶ್, ಮುಖಂಡರಾದ ಹೊಂಡರಬಾಳು ವಾಸು, ದೇವಲಾಪುರ ಶಿವಣ್ಣ, ರಂಗಸ್ವಾಮಿ ಗಾಳೀಪುರ, ಸಿದ್ದರಾಜು ದೊಡ್ಡರಾಯಪೇಟೆ, ರಾಜಶೇಖರ, ಆಶ್ರಿತ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net