

ಹಾರೋಹಳ್ಳಿ: ಕನಕಪುರ ತಾಲೂಕು ಮರಳವಾಡಿ ಹೋಬಳಿಯ ಕುಂಬಾರದೊಡ್ಡಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಸ್ಮಶಾನದ ವ್ಯವಸ್ಥೆ ಇಲ್ಲದ ಕಾರಣ, ವೃದ್ಧೆಯೊಬ್ಬರ ಶವವನ್ನು ರಸ್ತೆಯಲ್ಲಿ ಇಟ್ಟ ಸಂಬಂಧಿಕರು ಮತ್ತು ಗ್ರಾಮಸ್ಥರು ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು. ಟೈರ್‌ಗಳಿಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದರು.
ಗ್ರಾಮದ ನಿವಾಸಿ ಲಕ್ಷ್ಮಮ್ಮ (74) ಸೋಮವಾರ ಬೆಳಗ್ಗೆ ಮೃತಪಟ್ಟಿದ್ದರು. ಇವರಿಗೆ ಸ್ವಂತ ಜಮೀನು ಇರಲಿಲ್ಲ. ಹಾಗಾಗಿ ಇವರ ಸಂಬಂಧಿಕರು ಹತ್ತಿರದಲ್ಲೇ ಇರುವ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಗುಂಡಿ ತೆಗೆದು ಅಂತ್ಯಸಂಸ್ಕಾರ ನೆರವೇರಿಸಲು ಮುಂದಾಗಿದ್ದರು.
ಅಧಿಕಾರಿಗಳ ಬೆದರಿಕೆ: ಅರಣ್ಯ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು, ಗುಂಡಿ ತೆಗೆಯದಂತೆ ತಡೆದರು. ಜತೆಗೆ ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿರುವುದಾಗಿ ನಿಮ್ಮೆಲ್ಲರ ವಿರುದ್ಧ ಪ್ರಕರಣ ದಾಖಲಿಸಿ, ಜೈಲಿಗೆ ಅಟ್ಟುವುದಾಗಿ ಬೆದರಿಸಿದರು. ಇದರಿಂದ ಸಿಟ್ಟಾದ ಲಕ್ಷ್ಮಮ್ಮ ಅವರ ಸಂಬಂಧಿಕರು ಮತ್ತು ಕುಂಬಾರದೊಡ್ಡಿ, ತೇರುಬೀದಿ, ದೊಡ್ಡೂರು, ಕರಡಿದೊಡ್ಡಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಮರಳವಾಡಿ-ತಳಿ ಮುಖ್ಯರಸ್ತೆಗೆ ಶವವನ್ನು ತಂದಿರಿಸಿ ಪ್ರತಿಭಟನೆ ಆರಂಭಿಸಿದರು.
ಪೊಲೀಸರೂ ಹೆದರಿಸಿದರು: ಮರಳವಾಡಿ-ತಳಿ ಮುಖ್ಯರಸ್ತೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಹಾರೋಹಳ್ಳಿ ಠಾಣೆಯ ಪೊಲೀಸರು, ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡಲು ಅವಕಾಶವಿಲ್ಲ. ತಕ್ಷಣವೇ ಪ್ರತಿಭಟನೆ ನಿಲ್ಲಿಸಬೇಕು. ಶವವನ್ನು ತೆಗೆದುಕೊಂಡು ಹೋಗಿ ಎಲ್ಲಾದರೂ ಅಂತ್ಯಸಂಸ್ಕಾರ ನೆರವೇರಿಸಬೇಕು. ಇಲ್ಲವಾದಲ್ಲಿ, ಕರೊನಾ ಮಾರ್ಗಸೂಚಿ ಉಲ್ಲಂಸಿರುವುದಾಗಿ ಹೇಳಿ ಪ್ರಕರಣ ದಾಖಲಿಸುವುದಾಗಿ ಬೆದರಿಸಿದರು.
ಜಗ್ಗದ ಜನರು: ಶವಸಂಸ್ಕಾರ ಮಾಡಲು ಗ್ರಾಮದಲ್ಲಿ ಸ್ಥಳ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದಕ್ಕೆ ಅಡ್ಡಿಪಡಿಸಿ, ಪ್ರಕರಣ ದಾಖಲಿಸುವುದಾದರೆ ದಾಖಲಿಸಿಕೊಳ್ಳಿ. ಅದನ್ನು ಎದುರಿಸಲೂ ಸಿದ್ಧ ಎಂದು ಸವಾಲು ಹಾಕಿದ ಗ್ರಾಮಸ್ಥರು ಟೈರ್‌ಗಳಿಗೆ ಬೆಂಕಿ ಇಟ್ಟು ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ಭರವಸೆಯಾಗೇ ಉಳಿದ ಜಿಲ್ಲಾಧಿಕಾರಿ ಮಾತು: ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಅರ್ಚನಾ ಅವರನ್ನು ಭೇಟಿಯಾಗಿದ್ದ ಕುಂಬಾರದೊಡ್ಡಿ ಗ್ರಾಮಸ್ಥರು ಸ್ಮಶಾನಕ್ಕಾಗಿ ಜಾಗ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡಿದ್ದರು. ತಹಸೀಲ್ದಾರ್ ಅವರಿಗೂ ಇದೇ ಮನವಿಪತ್ರ ಸಲ್ಲಿಸಿದ್ದರು. ಆಗ ಮಾತನಾಡಿದ್ದ ಅರ್ಚನಾ ಅವರು, ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಇದಾಗಿ ಹಲವು ತಿಂಗಳು ಕಳೆದರೂ ಸ್ಮಶಾನಕ್ಕೆ ಜಾಗ ಮಂಜೂರು ಆಗಿಯೇ ಇಲ್ಲ. ಅವರ ಮಾತು ಭರವಸೆಯಾಗಿಯೇ ಉಳಿದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗಮನಿಸದ ಜನಪ್ರತಿನಿಧಿಗಳು: ಮಾಜಿ ಸಿಎಂ, ಶಾಸಕ ಎಚ್.ಡಿ. ಕುಮಾರಸ್ವಾಮಿ, ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಕೂಡ ಕುಂಬಾರದೊಡ್ಡಿಯಲ್ಲಿ ಸ್ಮಶಾನ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಇವರಲ್ಲದೆ, ಸ್ಥಳೀಯ ಜನಪ್ರತಿನಿಧಿಗಳಿಗೂ ಮನವಿಪತ್ರ ಸಲ್ಲಿಸಲಾಗಿದೆ. ಆದರೂ ಸ್ಮಶಾನದ ವ್ಯವಸ್ಥೆ ಆಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಎಲ್ಲರೂ ಬಂದು ಮತ ಕೇಳುತ್ತಾರೆ. ಗೆದ್ದರೆ, ವ್ಯವಸ್ಥೆ ಮಾಡಿಕೊಡುವುದಾಗಿ ಬಾಯ್ಮತಿನ ಭರವಸೆ ನೀಡುತ್ತಾರೆ. ಬಳಿಕ ಯಾರೊಬ್ಬರೂ ಇತ್ತ ಗಮನಿಸುವುದಿಲ್ಲ ಎಂದು ಗ್ರಾಮಸ್ಥ ರವೀಶ್ ಹೇಳಿದರು.
ಸ್ವಂತ ಜಮೀನು ಹೊಂದಿರುವವರಿಗೆ ಸಮಸ್ಯೆ ಇಲ್ಲ. ಆದರೆ, ಜಮೀನು ಇಲ್ಲದವರ ಅಂತ್ಯಸಂಸ್ಕಾರಕ್ಕೆ ಭಾರಿ ತೊಂದರೆಯುಂಟಾಗುತ್ತಿದೆ ಎಂದು ಅಲವತ್ತುಕೊಂಡರು.
ಮಂಗಳವಾರ ಅಂತ್ಯಕ್ರಿಯೆ: ಪ್ರತಿಭಟನಾ ಸ್ಥಳಕ್ಕೆ ಬಂದ ಮರಳವಾಡಿ ಹೋಬಳಿಯ ಕಂದಾಯ ನಿರೀಕ್ಷಕ ಶಿವರುದ್ರಪ್ಪ ಅವರು, ಶವಸಂಸ್ಕಾರಕ್ಕೆ ಜಾಗದ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪಿಕೊಂಡ ಗ್ರಾಮಸ್ಥರು ಪ್ರತಿಭಟನೆ ಸ್ಥಗಿತಗೊಳಿಸಿದ್ದರು. ಮಂಗಳವಾರ ಬೆಳಗ್ಗೆ ಗ್ರಾಮದ ಕೆರೆಯ ದಡದಲ್ಲಿ ಒಂದೆಡೆ ಶವಸಂಸ್ಕಾರಕ್ಕೆ ಶಿವರುದ್ರಪ್ಪ ಅವರು ಸ್ಥಳ ತೋರಿಸಿದರು. ಗ್ರಾಮಸ್ಥರು ಅಲ್ಲಿ ಲಕ್ಷ್ಮಮ್ಮ ಅವರ ಅಂತ್ಯಕ್ರಿಯೆ ನೆರವೇರಿಸಿದರು.