ಸ್ಮಶಾನ ಭೂಮಿ ಸ್ವಚ್ಛತೆಗೆ ಆಗ್ರಹ

ydg01
Published on

ಶಹಾಪುರ: ತಾಲೂಕಿನ ಗೋಗಿಪೇಠ್ ಗ್ರಾಮದ ಸ್ಮಶಾನ ಭೂಮಿ ಸ್ವಚ್ಛಗೊಳಿಸಿ ಮೂಲಭೂತ ಸೌಲಭ್ಯ ಒದಗಿಸುವಂತೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ಮತ್ತು ದೇವಾಂಗ ಸಮಾಜ, ವಿಶ್ವಕರ್ಮ ಸಮಾಜ, ಸ್ವಕುಳಿಸಾಳಿ ಸಮಾಜ ಸೇರಿ ವಿವಿಧ ಸಮಾಜದ ಮುಖಂಡರು ತಹಸೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

ತಾಲೂಕಿನ ದೊಡ್ಡ ಗ್ರಾಮವಾದ ಗೋಗಿಪೇಠ್, ಜಿಪಂ, ತಾಪಂ ಮತ್ತು ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಇಲ್ಲಿನ ಸ್ಮಶಾನ ಭೂಮಿ ಜಾಗ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಯಾಗಿದೆ. ಶವಗಳನ್ನು ತೆಗದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಲು ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ವೀರಶೈವ ಸಮಾಜ ಸೇರಿ ಅನೇಕ ಸಮುದಾಯಗಳ ಜನರು ನಿಧನರಾದರೆ, ಈ ಸ್ಥಳದಲ್ಲಿಯೇ ಶವ ಸಂಸ್ಕಾರ ಮಾಡಲಾಗುತ್ತಿದೆ. ಇದು ಕಳೆದ ಐವತ್ತು ವರ್ಷಗಳಿಂದ ಇರುವ ಜಾಗ, ಆದರೆ ಕಳೆದ ಏಳೆಂಟು ವರ್ಷಗಳಿಂದ ಇಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುವುದು, ಸತ್ತ ಪ್ರಾಣಿಗಳನ್ನು ತಂದು ಹಾಕುವುದು, ಒಳಗಡೆ ಜಾಲಿಮುಳ್ಳಿನ ಗಿಡಗಳು ಬೆಳೆದಿವೆ. ಕೂಡಲು ಆಸನಗಳಿಲ್ಲ. ಈ ಸ್ಥಳಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿಯೇ ಜನರು ಹೊಲಸು ಮಾಡುತ್ತಿದ್ದು, ಅತ್ತ ಸುಳಿಯದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಮಶಾನ ಭೂಮಿಯಲ್ಲಿ ದೀಪ, ನೀರು ಸಮರ್ಪಕ ರಸ್ತೆ ಹೀಗೆ ಸೇರಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಇದರಿಂದ ಗ್ರಾಮಸ್ಥರಿಗೆ ಹೇಳತೀರದಷ್ಟು ತೊಂದರೆಯಾಗಿದೆ. ಗ್ರಾಮ ಪಂಚಾಯಿತಿಗೆ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಆರೋಪಿಸಿದರು.
ಯಾರಾದರೂ ಸತ್ತರೇ ಶವ ಸಂಸ್ಕಾರ ಹೇಗೆ ಮಾಡುವುದು ಎಂಬ ಚಿಂತೆ ಕಾಡುತ್ತಿದೆ. ಕಾರಣ ಕೂಡಲೇ ಈ ಎಲ್ಲ ಬೇಡಿಕೆ ಈಡೆರೀಸಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಸಮಸ್ತ ಗ್ರಾಮಸ್ಥರಿಂದ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

ಮುಖಂಡರಾದ ಅಮರೇಶ ಪೂಜಾರಿ, ಭೀಮಣ್ಣ ಚನಗುಂಡಿ, ವಿಜಯಕುಮಾರ ಗೋಳೆದ್, ಮೃತ್ಯುಂಜಯ ಕಲ್ಲತ್ತಿ, ಕಲ್ಯಾಣ ಶೆಟ್ಟಿ ಅಂಗಡಿ, ವಿಶಾಲ ಜಿಂದೆ, ಗುರುರಾಜ ದೇವಾಪುರ, ಸುಭಾಷ ಕಾಯಿ, ನಾಗರಾಜ್ ಪತ್ತಾರ್, ಸುನೀಲ ಮಲ್ಲಾಡ್, ಸೂಗುರೇಶ ಮಲ್ಲೆದ್, ಸಾಗರ ಸೋಮನಕಟ್ಟಿ, ಮಾರುತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net