

ಅರಕಲಗೂಡು: ತಾಲೂಕಿನ ಶಂಭುನಾಥಪುರ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಜಾಗ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ತಹಸೀಲ್ದಾರ್‌ಗೆ ಸೂಚಿಸಿದರು.
ಗ್ರಾಮದಲ್ಲಿ ಕಳೆದ ತಿಂಗಳು ನಿಧನರಾಗಿದ್ದ ದಲಿತ ಕುಟುಂಬದ ಗಿಡ್ಡಯ್ಯ ಎಂಬುವರ ಶವ ಸಂಸ್ಕಾರ ನಡೆಸಲು ಸ್ಮಶಾನ ಜಾಗ ಇಲ್ಲದ ಕಾರಣ ಮನೆಯ ಮುಂಭಾಗವೇ ಸಮಾಧಿ ಗುಂಡಿ ತೋಡಲು ಗ್ರಾಮಸ್ಥರು ಮುಂದಾಗಿದ್ದರು. ಬಳಿಕ ಅಧಿಕಾರಿಗಳ ಮಧ್ಯಸ್ಥಿಕೆಯಿಂದಾಗಿ ಖಾಸಗಿ ಜಮೀನಿನಲ್ಲಿ ಮೃತ ವ್ಯಕ್ತಿಯ ಶವ ಸಂಸ್ಕಾರ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಸ್ಮಶಾನ ಜಾಗದ ಸಮಸ್ಯೆ ಕುರಿತು ಗ್ರಾಮಸ್ಥರ ಆಹವಾಲು ಆಲಿಸಿ, ಗ್ರಾಮದಲ್ಲಿ ದಲಿತ ಕುಟುಂಬಗಳಿಗೆ ಸ್ಮಶಾನ ಜಾಗ ಒದಗಿಸುವಂತೆ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅವರಿಗೆ ಸೂಚನೆ ನೀಡಿದರು.
ಸರ್ವೇ ನಂ. 44ರಲ್ಲಿ 11 ಗುಂಟೆ ಖಾಸಗಿ ಜಮೀನು ಇದ್ದು ಮಾರುಕಟ್ಟೆ ದರದಲ್ಲಿ ಖರೀದಿಸಿ ಇದನ್ನು ಸ್ಮಶಾನ ಜಾಗಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಗ್ರಾಮದಲ್ಲಿ ಈ ರೀತಿಯ ಸಮಸ್ಯೆಗಳು ಉದ್ಭವಿಸಿದರೆ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ತಾಪಂ ಇಒ ಗಿರೀಧರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿಕುಮಾರ್, ತಾಲೂಕು ಕಚೇರಿ ಶಿರಸ್ತೇದಾರ್ ಸಿ. ಸ್ವಾಮಿ, ರಾಜಸ್ವ ನಿರೀಕ್ಷಕ ದಾನುಪ್ರಕಾಶ್, ಗ್ರಾಮ ಲೆಕ್ಕಾಧಿಕಾರಿ ಶೋಭಾ, ವಡ್ಡರಹಳ್ಳಿ ಗ್ರಾಪಂ ಪಿಡಿಒ ಶೀಲಾ ಇತರರಿದ್ದರು.