'ಸ್ಮತಿಯಲ್ಲಿ ಚದುರಂಗರ ವ್ಯಕ್ತಿತ್ವ ಅನಾವರಣ'

2
Published on

ಮೈಸೂರು: ಒಬ್ಬ ಚಿತ್ರ ಕಲಾವಿದ ಕುಂಚದಲ್ಲಿ ಎಷ್ಟು ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರ ಬರೆಯಬಹುದೋ ಅಷ್ಟು ಚೆಂದವಾಗಿ ಚದುರಂಗ ಅವರ ಚಿತ್ರಣವನ್ನು ಅವರ ಪುತ್ರ ವಿಕ್ರಂ ಚದುರಂಗ ಚಿತ್ರಿಸಿದ್ದಾರೆ ಎಂದು ವಿದ್ವಾಂಸ ಪ್ರೊ.ಹಂಪ ನಾಗರಾಜಯ್ಯ (ಹಂಪನಾ) ಬಣ್ಣಿಸಿದರು.
ನಗರದ ಗಾನಭಾರತೀ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂವಹನ ಪ್ರಕಾಶನದಿಂದ ಹೊರತರಲಾಗಿರುವ ವಿಕ್ರಂ ಚದುರಂಗ ಅವರ ‘ಸ್ಮತಿ’ (ಸಾಂಸ್ಕೃತಿಕ ಸಂಕಥನ) ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಸ್ಮತಿ ಹಲವು ಆಯಾಮಗಳ, ಅನನ್ಯತೆ ಮತ್ತು ಅಪೂರ್ವತೆಯನ್ನು ಒಳಗೊಂಡ ಪುಸ್ತಕವಾಗಿದೆ. ಚಿತ್ರ ಕಲಾವಿದ ಕುಂಚದಲ್ಲಿ ಚಿತ್ರ ಮೂಡಿಸಿದಂತೆ ವಿಕ್ರಂ ಅವರು ಚದುರಂಗ ಅವರ ವ್ಯಕ್ತಿತ್ವದ ಚಿತ್ರಣವನ್ನು ಶಬ್ದಗಳಲ್ಲಿ ರೂಪಿಸಿದ್ದಾರೆ ಎಂದು ಹೇಳಿದರು.
ತನ್ನ ತಾಯಿ-ತಂದೆಯ ವ್ಯಕ್ತಿತ್ವವನ್ನು ಅದ್ಭುತವಾಗಿ ಪದಗಳಲ್ಲಿ ರೂಪಿಸಿದ್ದಾರೆ. ಕೆಲವು ಪುಟಗಳನ್ನು ಓದುವಾಗ ಖುಷಿ, ನೋವು ಸೇರಿದಂತೆ ಅನೇಕ ಭಾವಗಳು ಹುಟ್ಟುತ್ತವೆ. ತಾಯಿಯ ವ್ಯಕ್ತಿತ್ವ ಚಿತ್ರಣವನ್ನು ಅಮೃತ ಪುತ್ಥಳಿ ನಿಲ್ಲಿಸಿದ ರೀತಿ ಅಕ್ಷರಗಳಲ್ಲಿ ರೂಪಿಸಿದ್ದಾರೆ. ತನ್ನ ಸಂಗಾತಿ ವಿಜಯಲಕ್ಷ್ಮೀ ಅರಸ್ ಅವರ ಬಗ್ಗೆಯೂ ಅದ್ಭುತವಾಗಿ ಬರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚದುರಂಗ ಅವರು ನನ್ನ ಬದುಕಿನಲ್ಲಿಯೂ ಗಾಢವಾದ ನೆನಪುಗಳನ್ನು ಬಿತ್ತಿದ್ದಾರೆ. ನಾನು ಮಹಾರಾಜ ಕಾಲೇಜಿನಲ್ಲಿ ಓದುವಾಗಲೇ ಚದುರಂಗ ಅವರ ಪರಿಚಯವಿತ್ತು. ನಂತರ ಕುವೆಂಪು, ದೇಜಗೌ ಇತರ ಸಾಹಿತಿಗಳ ಸಹಾಯದಿಂದ ಚದುರಂಗ ಅವರು ಮತ್ತಷ್ಟು ಹತ್ತಿರವಾದರು. ನಂತರ ನಾನು ಬರೆದ ‘ನೆನಪಿನಂಗಳದಲ್ಲಿ ಮಾಸ್ತಿ ’ಎಂಬ ಸಣ್ಣಪುಸ್ತಕಕ್ಕೆ ಚದುರಂಗ ಅವರು ಮುನ್ನುಡಿ ಬರೆದಿದ್ದರು ಎಂದು ಸ್ಮರಿಸಿದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಚದುರಂಗ ಅವರ ನಡುವಿನ ಸಂಬಂಧವನ್ನು ಸ್ವಂತ ಮತ್ತು ಸಾಹಿತ್ಯಿಕ ಲಾಭಗಳಿಗೆ ಬಳಸಿಕೊಳ್ಳಲು ಕೆಲವು ಸಾಹಿತಿಗಳು ಚದುರಂಗ ಅವರ ಸಾಹಿತ್ಯವನ್ನು ಹೇಗೆ ಹೊಗಳುತ್ತಿದ್ದರು ಎಂಬುದನ್ನು ಇಲ್ಲಿ ಹೇಳಿದ್ದಾರೆ. ಸಹಜೀವನದ ಸೌಖ್ಯ, ಕಷ್ಟ-ಸುಖಗಳ ಹಂಚಿಕೆ ಬಗ್ಗೆ ವಿವರಿಸಿದ್ದಾರೆ ಎಂದರು.
ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್ ಮಾತನಾಡಿ, ಜೀವನ ಮೌಲ್ಯಗಳು, ಅಲ್ಲಲ್ಲಿ ಅನಾವರಣಗೊಳ್ಳುವ ಇತಿಹಾಸದ ಎಳೆಗಳು, ಲೇಖಕರ ಸ್ವಗತ, ಸ್ವಂತಿಕೆಗಳು, ಈ ಎಲ್ಲದರ ಒಟ್ಟು ಮೊತ್ತವಾಗಿರುವ ‘ಸ್ಮತಿ’ ಓದುಗರ ಗಮನ ಸೆಳೆದು, ಕುತೂಹಲ ಮೂಡಿಸುತ್ತದೆ ಎಂದರು.
ಓದುಗರನ್ನು ಕೆಲಕಾಲ ನಿಲ್ಲಿಸಿ, ಅನುಸಂಧಾನಿಸುವಂತೆ ಪ್ರೇರೇಪಿಸುವ ಭೂತ ಮತ್ತು ವರ್ತಮಾನ ಆಧರಿಸಿರುವ ಕೃತಿಯಾಗಿದೆ. ಭಿನ್ನವಾದ ಹೊಸತರನಾದ ನಿರೂಪಣಾ ತಂತ್ರವನ್ನು ಅವರು ಪ್ರಯೋಗಿಸಿದ್ದಾರೆ. ಈ ತಂತ್ರ ಓದುಗರನ್ನು ತಟ್ಟನೆ ಸ್ಪರ್ಶಿಸಿ ಬಿಡುತ್ತದೆ. ಸ್ಮತಿಯಲ್ಲಿ ಅನನ್ಯ ಜೀವನ ಪ್ರೀತಿ ಇದೆ, ಮಾನವೀಯ ಅಂತಃಕರಣವಿದೆ, ಸಹನೆ, ತ್ಯಾಗಗಳು ಇವೆ. ಬದುಕು ಗೆಲ್ಲುವ ದಾರಿಗಳು ಇವೆ. ನೋವು-ನಲಿವುಗಳು, ಭರವಸೆ ಮತ್ತು ಆತ್ಮವಿಶ್ವಾಸಗಳು ಇವೆ ಎಂದು ಹೇಳಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುಸ್ತಕದ ಮೊದಲ ಪ್ರತಿಯನ್ನು ದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ ಸ್ವೀಕರಿಸಿದರು. ಲೇಖಕ ವಿಕ್ರಂ ಚದುರಂಗ, ಪ್ರಕಾಶಕ ಡಿ.ಎನ್.ಲೋಕಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net