

ಹನೂರು: ತಾಲೂಕಿನ ಮಲೆಮಹದೇಶ್ವರಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ರಸ್ತೆ ನಿರ್ಮಿಸುವಾಗ ಸ್ಫೋಟಕದಿಂದ ಹಾನಿಯಾಗಿರುವ ಮನೆಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಭಾನುವಾರ ಕುಟುಂಬಸ್ಥರು ರೈತರ ಜತೆಗೂಡಿ ಪ್ರಾಧಿಕಾರದ ಕಚೇರಿ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಕಾರರು, ರಸ್ತೆ ನಿರ್ಮಿಸುವ ಸಲುವಾಗಿ ಬಂಡೆಗಳನ್ನು ಒಡೆಯಲು ಸ್ಫೋಟಕಗಳನ್ನು ಬಳಸಲಾಗಿದ್ದು, ಹುಚ್ಚಯ್ಯ ಹಾಗೂ ಸುಂದರಿ ಎಂಬವರ ಮನೆ ಗೋಡೆಗಳು ಬಿರುಕು ಬಿಟ್ಟು ಹಾನಿಯಾಗಿವೆ. ಆದ್ದರಿಂದ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಕೂಡಲೇ ಅಗತ್ಯ ಕ್ರಮಕೈಗೊಂಡು ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ಕಚೇರಿಯಲ್ಲಿ ಅಧಿಕಾರಿಗಳು ಇಲ್ಲದ ಪರಿಣಾಮ ಸೋಮವಾರವೂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದರು.ಹುಚ್ಯಯ್ಯ, ಸುಂದರಿ ರೈತ ಮುಖಂಡರಾದ ಪ್ರಸಾದ್, ಮಾದೇವ ಇತರರಿದ್ದರು.