ಸ್ಫೋಟಕ ದಾಸ್ತಾನು ಅಕ್ರಮ

29_
Published on

ಪಾವಗಡ: ತಾಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿ ಅಚ್ಚಮ್ಮನಹಳ್ಳಿಯಲ್ಲಿ ಕೆಎಸ್​ಪಿಡಿಸಿಎಲ್​ಯಿಂದ ಸೋಲಾರ್​ ಪಾರ್ಕ್​ನಲ್ಲಿ ಸಬ್​ ಸ್ಟೇಷನ್​ ನಿಮಾರ್ಣದ ವೇಳೆ ಸ್ಫೋಟಕ ಸ್ಫೋಟಗೊಂಡು ಒಬ್ಬರು ಸ್ಥಳದಲ್ಲೇ ಮೃತಪಟ್ಟು, ಒಬ್ಬರು ಗಂಭೀರ ಗಾಯಗೊಂಡ ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಮತ್ತು ಎಎಸ್​ಪಿ ಮರಿಯಪ್ಪ, ಅಬ್ದುಲ್​ ಖಾದರ್​, ಬಾಂಬ್​ ನಿಷ್ಕ್ರಿಯ ದಳದೊಂದಿಗೆ ಭೇಟಿ ಮಾಡಿ ಪರಿಶೀಲಿಸಿದರು. ಈ ವೇಳೆ ವಿವಿಧ 54 ಸ್ಫೋಟಕಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡು ಬಂದಿದೆ.

ಸೋಮವಾರ ಮಧ್ಯಾಹ್ನ ಸೋಲಾರ್​ ಪಾರ್ಕ್​ ನಿಮಾರ್ಣಕ್ಕೆ ಬಂಡೆ ಒಡೆಯಲು ಸ್ಫೋಟಕ ಬಳಸಲಾಗಿತ್ತು. ಸ್ಫೋಟದ ವೇಳೆ ಚಿಮ್ಮಿದ ಬೆಂಕಿ ಆರಿಸಲು ಕೂಲಿ ಕಾರ್ಮಿಕರು ಮುಂದಾಗಿದ್ದರು. ಆದರೆ, ಕಾರ್ಮಿಕರಿಗೂ ತಿಳಿಯದಂತೆ ಮತ್ತಷ್ಟು ಸ್ಫೋಟಕವನ್ನು ಮಣ್ಣಿನಲ್ಲಿ ಹೂಳಲಾಗಿತ್ತು. ಬೆಂಕಿ ನಂದಿಸುವ ವೇಳೆ ಮತ್ತಷ್ಟು ವಸ್ತುಗಳು ಸ್ಫೋಟವಾಗಿ ಸ್ಥಳದಲ್ಲಿಯೇ ಕಾರ್ಮಿಕ ಮೃತಪಟ್ಟಿದ್ದ.

ಹಲವು ವಸ್ತು ವಶ:ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ ವೇಳೆ ಸೋಲಾರ್​ ಪಾರ್ಕ್​ ಸಬ್​ಸ್ಟೇಷನ್​ ಸುತ್ತಮುತ್ತಲು ನೆಲದಲ್ಲಿ 54 ಬಾಂಬ್​ ಸ್ಫೋಟಕ ವಸ್ತುಗಳನ್ನು ಹೂತಿಟ್ಟಿರುವ ವಿಷಯ ತಿಳಿಸಿದ್ದರೂ, ಅಷ್ಟೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾವಗಡ ಸಿಪಿಐ ಸುರೇಶ್​, ಗ್ರಾಮಾಂತರ ಸಿಪಿಐ ಗಿರೀಶ್​, ಕೆಎಸ್​ಪಿಡಿಸಿಎಲ್​ ಎಇಇ ಮಹೇಶ್​, ಬಾಂಬ್​ ನಿಷ್ಕ್ರಿಯದಳ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸಿಬ್ಬಂದಿ

ಸುತ್ತಮುತ್ತಲಿನ ಗ್ರಾಮದ ಜನ ಹಾಜರಿದ್ದರು.

ಸ್ಫೋಟಕ ಬಳಕೆಗಿಲ್ಲ ಸಮ್ಮತಿ: ತಾಲೂಕಿನ ರಾಯಚೇರ್ಲು ಗ್ರಾಮದಲ್ಲಿ ಕೆಎಸ್​ ಪಿ.ಡಿಸಿಎಲ್​ ವತಿಯಿಂದ ರೈತರಿಂದ 1500 ಎಕರೆ ಭೂಮಿಯನ್ನು ವಶ ಪಡೆದು ಸೋಲಾರ್​ ಪಾರ್ಕ್​ ಅಭಿವೃದ್ಧಿಗೆ ಜೆಎಸ್​ಡಬ್ಲ್ಯು ಕಂಪನಿಗೆ ನೀಡಲಾಗಿದ್ದು. ಈ ಕಂಪನಿಯು ಅಮರ್​ರಾಜ್​ ಕಂಪನಿಗೆ ಒಳಗುತ್ತಿಗೆ ನೀಡಿತ್ತು. ಅಮರ್​ ರಾಜ್​ ಕಂಪನಿ ಸ್ಥಳಿಯರಿಗೆ ಸಬ್​ ಕಾಂಟ್ರಾ$್ಯಕ್ಟ್​ ನೀಡಿ, ಸ್ಫೋಟಕ ವಸ್ತುಗಳನ್ನು ಉಪಯೋಗಿಸಿ ಅಲ್ಲಿಯ ಕಲ್ಲು ಬಂಡೆಗಳನ್ನು ತೆಗೆಯಲು ಮುಂದಾಗಿದ್ದು, ಇದಕ್ಕೆ ಯಾವುದೇ ಇಲಾಖೆಯಿಂದ ಅನುಮತಿ ಪಡೆಯದಿರಲಿಲ್ಲ. ಅಕ್ರಮವಾಗಿ ಸ್ಫೋಟಕ ಬಳಸಿ ಕೂಲಿಕಾರ್ಮಿಕರನ್ನು ಬಲಿ ಪಡೆದುಕೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ.

ನಾಲ್ವರ ಬಂಧನ:ಸೋಮವಾರ ರಾತ್ರಿ 11ರಿಂದ ಜಿಲ್ಲಾಮಟ್ಟದ ಪೊಲೀಸ್​ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿ ಆಂಧ್ರ ಪ್ರದೇಶ ಮೂಲದ ಬಾಂಬ್​ ಬ್ಲಾಸ್ಟರ್​ ಪೋತಲ್ಯ, ಶ್ರೀನಿ ಮತ್ತು ಅಮರ್​ ರಾಜ್​ ಕಂಪನಿಯ ವೇಂಕಟರಾಮರೆಡ್ಡಿ

ಮತ್ತು ಗುತ್ತಿಗೆದಾರ ತಾರನಾಥ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net