ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಭಾಗಶಃ ಉದ್ಘಾಟನೆ

TMK_PAGE_7 Lead
ಕ್ಯಾತ್ಸಂದ್ರದ ಟ್ರಕ್ ಟರ್ಮಿನಲ್‌ನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ಕ್ರೀಡಾ ಸಮುಚ್ಛಯದಲ್ಲಿ ಸಾರ್ವಜನಿಕ ಈಜು ಕೋಳಕ್ಕೆ ಚಾಲನೆ ನೀಡಲಾಯಿತು. ಟೂಡಾ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್, ಆಯುಕ್ತ ಗೋಪಾಲ್ ಜಾದವ್, ಸದಸ್ಯರಾದ ಸತ್ಯಮಂಗಲದ ಜಗದೀಶ್, ಸುಜ್ಞಾನ ಪ್ರಭು ಹಿರೇಮಠ್, ಪ್ರತಾಪ್, ಮಧು, ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.
Published on

ತುಮಕೂರು: ಚುನಾವಣಾ ನೀತಿ ಸಂಹಿತೆ ಯಾವುದೇ ಕ್ಷಣದಲ್ಲಾದರೂ ಜಾರಿಯಾಗುವ ಸಾಧ್ಯತೆ ಇರುವುದರಿಂದ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ, ನಗರಾಭಿವೃದ್ಧಿ ಪ್ರಾಧಿಕಾರದ ವಿವಿಧ ಕಾಮಗಾರಿಗಳನ್ನು ತರಾತುರಿಯಲ್ಲಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಶುಕ್ರವಾರ ನೆರವೇರಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ವತಿಯಿಂದ 5.6 ಕೋಟಿ ರೂ., ವೆಚ್ಚದಲ್ಲಿ ಕ್ಯಾತಸಂದ್ರದ ಟ್ರಕ್ ಟರ್ಮಿನಲ್‌ನಲ್ಲಿ 2018ರಲ್ಲಿ ನಿರ್ಮಿಸಿದ್ದ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ಗೆ ಕೊನೆಗೂ ಉದ್ಘಾಟನೆ ಭಾಗ್ಯ ದೊರೆಯಿತು.
ಕ್ರೀಡಾ ಸಮುಚ್ಛಾಯ ಭಾಗಶಃ ಉದ್ಘಾಟಿಸಿದ್ದು, ಈಜುಕೊಳದ ವಿಭಾಗ, ಟೆನ್ನಿಸ್ ಕೋರ್ಟ್ ಹಾಗೂ ಸ್ಕೇಟಿಂಗ್ ಅಂಕಣವನ್ನು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಇದಕ್ಕೆ ಸಾಕ್ಷಿಯಾದರು.
ತುಮಕೂರಿನಲ್ಲೇ ಪ್ರಪ್ರಥಮವೆನಿಸಿದ 3 ಅಂತಸ್ತಿನ ಹೈಟೆಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಯೋಗ, ಧ್ಯಾನ ಮಂದಿರ, ಜಿಮ್, ಏರೋಬಿಕ್ಸ್, ಈಜುಕೊಳವಿದ್ದು ಬಿಲಿಯರ್ಡ್ಸ್, ಟೇಬಲ್‌ಟೆನ್ನಿಸ್, ಶಟಲ್ ಬ್ಯಾಡ್ಮಿಂಟನ್ ಕೋರ್ಟ್‌ಗಳನ್ನು ನಿರ್ಮಿಸಲಾಗಿದೆ. ಸದ್ಯಕ್ಕೆ ಈಜುಕೊಳವನ್ನು ಮಾತ್ರ ಸಾರ್ವಜನಿಕರ ಬಳಕೆ ಮುಕ್ತಗೊಳಿಸಲಾಗಿದೆ. ಸ್ಕೇಟಿಂಗ್ ಕೋರ್ಟ್ ಕೂಡ ಉದ್ಘಾಟಿಸಲಾಗಿದೆ.

ಸ್ಮಾರ್ಟ್ ವೆಂಡಿಂಗ್ ರೆನ್ ಉದ್ಘಾಟನೆ:
ಸ್ಮಾರ್ಟ್‌ಸಿಟಿ ಯೋಜನೆ ಅಡಿ ನಗರದ ದೋಬಿಘಾಟ್ ಬಳಿಯ ಸ್ಮಶಾನಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗಿದ್ದ ವೆಂಡಿಂಗ್ ರೆನ್ ಅನ್ನು ಸಹ ಉದ್ಘಾಟಿಸಲಾಯಿತು. ದೋಬಿಘಾಟ್ ಸೇರಿ ನಗರದ 4 ಕಡೆ ವೆಂಡಿಂಗ್ ರೆನ್ ನಿರ್ಮಿಸಲಾಗುತ್ತಿದ್ದು, 4.5 ಕೋಟಿ ರೂ., ವೆಚ್ಚ ಮಾಡಲಾಗಿತ್ತು. ದೋಬಿಘಾಟ್ ಭಾಗದಲ್ಲಿನ ಬೀದಿಬದಿ ವ್ಯಾಪಾರಿಗಳಿಗೆ ಈ ವೆಂಡಿಂಗ್ ರೆನ್‌ನಲ್ಲಿ ಜಾಗಗಳನ್ನು ಹಂಚಿಕೆ ಮಾಡಲಾಯಿತು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಕಾರ್ಪೋರೇಟರ್ ಎಚ್.ಮಲ್ಲಿಕಾರ್ಜುನಯ್ಯ ಮತ್ತಿತರರು ಇದ್ದರು.

ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ:
ನಗರದ 23ನೇ ವಾರ್ಡಿಗೆ ಸೇರಿದ ಜಗನ್ನಾಥಪುರದಿಂದ ನವಿಲಹಳ್ಳಿವರೆಗೆಗಿನ ಸುಮಾರು 2.20 ಕಿ.ಮೀ. ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 48ರಿಂದ ಆಗ್ನಿಬನ್ನಿರಾಯ ಬಡಾವಣೆ, ಸಾಯಿ ಬಡಾವಣೆಗೆ ಸಂಪರ್ಕ ಕಲ್ಪಿಸುವ 7.1ಕಿ.ಮೀ., ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ಎಆರ್‌ಎಫ್ ಅನುದಾನದಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು.
ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್, ಮುಖಂಡರಾದ ಅಣೆತೋಟ ಶ್ರೀನಿವಾಸ್, ಪಿಡಬ್ಲ್ಯಡಿ ಎಇಇ ವಿಜಯಕುಮಾರ್, ಎಇ ಗಳಾದ ಸಿದ್ದಪ್ಪ, ಸಂಪತ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net