ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ

30blk7
 ಅನುಭವ ಮಂಟಪ ಉತ್ಸವದ ವಿವಿಧ ಸ್ಪರ್ಧೆ ಕರಪತ್ರವನ್ನು ಸಂಸದ ಸಾಗರ್ ಖಂಡ್ರೆ ಭಾಲ್ಕಿಯಲ್ಲಿ ಬುಧವಾರ ಬಿಡುಗಡೆಗೊಳಿಸಿದರು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಮೋಹನರೆಡ್ಡಿ, ಬಾಬು ಬೆಲ್ದಾಳ, ಸವಿತಾ ಭೂರೆ, ಪ್ರಶಾಂತ ರೆಡ್ಡಿ ಇದ್ದರು.
Published on

ಭಾಲ್ಕಿ: ಅನುಭವ ಮಂಟಪ ಉತ್ಸವ ನಿಮಿತ್ತ ಏರ್ಪಡಿಸಿರುವ ತಾಲೂಕು, ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.

೪೫ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ-೨೦೨೪ ನಿಮಿತ್ತ ವಿಶ್ವ ಬಸವಧರ್ಮ ಟ್ರಸ್ಟ್ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ಪರ್ಧೆಗಳ ಕರಪತ್ರ ಬಿಡುಗಡೆಗೊಳಿಸಿದ ಅವರು, ಮಕ್ಕಳಲ್ಲಿ ಶರಣತತ್ವ, ಬಸವತತ್ವದ ಮಹತ್ವ ಸಾರುವ ಉದ್ದೇಶದಿಂದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ. ಗೆಲುವು ಎನ್ನುವುದಕ್ಕಿಂತ ಮಕ್ಕಳ ಭಾಗವಹಿಸುವಿಕೆ ಮುಖ್ಯವಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಬೆಳೆಸುವಲ್ಲಿ ಶರಣರ ಕುರಿತ ಸ್ಪರ್ಧೆಗಳು ಪೂರಕವಾಗಿವೆ ಎಂದು ನುಡಿದರು.

ನೇತೃತ್ವ ವಹಿಸಿದ್ದ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿಸಲು ವಚನ ಸಾಹಿತ್ಯ ಅತ್ಯಂತ ಸಹಕಾರಿಯಾಗಿದೆ. ಶರಣ ಸಂಸ್ಕೃತಿ ಅರಿವು ಮೂಡಿಸಲು ಐದು ಸ್ಪರ್ಧೆ ಏರ್ಪಡಿಸಿದ್ದು, ತಾಲೂಕಿನ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ತಾಲೂಕು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಬಹುಮಾನ ತಮ್ಮದಾಗಿಸಿಕೊಳ್ಳಬೇಕು ಎಂದರು.

ಆಡಳಿತಾಧಿಕಾರಿ ಮೋಹನ ರೆಡ್ಡಿ, ಗುರುಪ್ರಸಾದ ಶಾಲೆ ಮುಖ್ಯಗುರು ಬಾಬು ಬೆಲ್ದಾಳ, ಸವಿತಾ ಭೂರೆ, ಪ್ರಶಾಂತ ರೆಡ್ಡಿ ಇದ್ದರು.

ವಿಜೇತರಿಗೆ ಬಹುಮಾನ: ತಾಲೂಕಿನಲ್ಲಿ ನ.೧೨ರೊಳಗೆ ಶರಣ ವಚನ ಗಾಯನ, ವಚನ ಭಾಷಣ, ವಚನ ಭಾವಾರ್ಥ ಲೇಖನ, ಶರಣರ ಕುರಿತ ರಸಪ್ರಶ್ನೆ ಮತ್ತು ರೂಪಕ ನಾಟಕ ಸ್ಪರ್ಧೆ ನಡೆಯಲಿವೆ. ತಾಲೂಕು ಮಟ್ಟದಲ್ಲಿ ವಿಜೇತ ಮೊದಲ ಮೂವರು ಮಕ್ಕಳಿಗೆ ಕ್ರಮವಾಗಿ ೧೦೦೦, ೫೦೦, ೩೦೦ ರೂ. ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಮೂರು ಸ್ಥಾನ ಪಡೆಯುವ ಮಕ್ಕಳಿಗೆ ೩೦೦೦, ೨೦೦೦, ೧೦೦೦ ರೂ. ಬಹುಮಾನ ಜತೆಗೆ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರಮಾಣಪತ್ರ ನೀಡಲಾಗುವುದು ಎಂದು ಪೂಜ್ಯರು ತಿಳಿಸಿದರು.

ಶ್ರೀಮಠದಲ್ಲಿ ದೀಪಾವಳಿ ಸಂಭ್ರಮ: ಹಿರೇಮಠ ಸಂಸ್ಥಾನದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿತು. ಶ್ರೀಮಠದ ಬಸವಣ್ಣನವರ ಮೂರ್ತಿ ಎದುರು ಪೂಜ್ಯರ ಸಮ್ಮುಖದಲ್ಲಿ ಗುರುಪ್ರಸಾದ ಶಾಲೆ ಮಕ್ಕಳು ಹಣತೆ ಹಿಡಿದು ದೀಪ ಬೆಳಗಿಸಿ ದೀಪಾವಳಿ ಆಚರಿಸಿದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಸಂಸದ ಸಾಗರ್ ಖಂಡ್ರೆ ಇದ್ದರು.

ಬಸವಣ್ಣನವರು, ಬಸವತತ್ವ, ವಚನ ಸಾಹಿತ್ಯ, ಧರ್ಮದ ಬಗ್ಗೆ ತಿಳಿದುಕೊಳ್ಳಲು ಶರಣರ ಕುರಿತ ನಡೆಯುವ ಸ್ಪರ್ಧೆಗಳಲ್ಲಿ ಮಕ್ಕಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.

| ಸಾಗರ್ ಖಂಡ್ರೆ ಸಂಸದ

ತಾಲೂಕು ಮಟ್ಟದ ಶರಣರ ಕುರಿತ ಸ್ಪರ್ಧೆ ನ.೧೨ರೊಳಗೆ ಪೂರ್ಣಗೊಳಿಸಿ ೧೬ರಂದು ಬಸವಕಲ್ಯಾಣದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net