ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ ಅಗತ್ಯ

12 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಸರ್ವಾಂಗೀಣ ಬೆಳವಣಿಗೆ ಹೊಂದಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸಲಹೆ ನೀಡಿದರು.
ನಗರದ ಕೆ.ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 2023-24ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಡಿಮೆ ಶುಲ್ಕ ಪಡೆದು ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಕೆ. ಇ. ಬೋರ್ಡ ಸಂಸ್ಥೆ ಕಾರ್ಯ ಶ್ಲಾಘನೀಯ. ಕರ್ತವ್ಯ ಮತ್ತು ಸಮಯ ಪ್ರಜ್ಞೆಯನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜತೆಗೆ ಕೌಶಲ ಮುಖ್ಯ. ಶಿಕ್ಷಕರು ಅರ್ಪಣಾ ಮನೋಭಾವನೆಯಿಂದ ವೃತ್ತಿಯಲ್ಲಿ ತೊಡಗಬೇಕು ಎಂದರು.
ಸಂಸ್ಥೆ ಕಾರ್ಯಾಧ್ಯಕ್ಷ ಎಸ್.ಟಿ. ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಇರುವ ಸೌಲಭ್ಯಗಳ ಪ್ರಯೋಜನ ಪಡೆಯಬೇಕು ಎಂದರು.
ಅರ್ಹ ಹಾಗೂ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ನೋಟಬುಕ್‌ಗಳನ್ನು ವಿತರಿಸಲಾಯಿತು. ಒಕ್ಕೂಟದ ಪದಾಧಿಕಾರಿಗಳಿಗೆ ವಿಭಾಗಗಳ ಹಂಚಿಕೆ ಮಾಡಲಾಯಿತು. ಎಸ್.ಎಲ್.ಶೇಖರಗೋಳ, ಶ್ರೀನಿವಾಸ ಪರಾಂಡೆ, ಡಾ. ಎಸ್.ಎಸ್.ಹನಮಂತಗಡ, ವಸಂತ ಮುರ್ಡೇಶ್ವರ, ಮೋಹನ ಸಿದ್ಧಾಂತಿ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು.
ಪ್ರಾಚಾರ್ಯೆ ಸುನಿತಾ ಕಡಪಟ್ಟಿ ಸ್ವಾಗತಿಸಿದರು. ಹೇಮಲತಾ ಕರಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀನಾ ಲಮಾಣಿ ನಿರೂಪಿಸಿದರು. ಕಲ್ಪನಾ ಲಮಾಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net