ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡಿಗರ ಭಾಗವಹಿಸುವಿಕೆ ಹೆಚ್ಚಲಿ

10
Published on

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಅಭ್ಯರ್ಥಿಗಳ ಭಾಗವಹಿಸುವಿಕೆ ಹೆಚ್ಚಾಗಬೇಕು. ಆಗ ಮಾತ್ರ ನಮ್ಮೂರಿನ ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ಕಂಪು ಅನುರಣಿಸುತ್ತದೆ ಎಂದು ಪಶ್ಚಿಮ ಬಂಗಾಳ ಕೇಡರ್‌ನ ಐಎಎಸ್ ಅಧಿಕಾರಿ, ಮಿಡ್ನಾಪುರ ವೆಸ್ಟ್‌ನ ಹೆಚ್ಚುವರಿ ಜಿಲ್ಲಾಧಿಕಾರಿ ಕರ್ನಾಟಕ ಮೂಲದ ಕೆಂಪಹೊನ್ನಯ್ಯ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಬ್ಯಾಂಕಿಂಗ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಹಮ್ಮಿಕೊಂಡಿರುವ 45 ದಿನಗಳ ತರಬೇತಿ ಶಿಬಿರವನ್ನು ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕಿಂಗ್, ಸೇನೆ, ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇತರ ರಾಜ್ಯದವರಿಗೆ ನಾವು ಅವಕಾಶ ಬಿಟ್ಟುಕೊಟ್ಟಿದ್ದೇವೆ. ಈ ಮನೋಭಾವ ಬದಲಾಗಬೇಕು. ಆಸೆಯ ಜತೆಗೆ ಮಹಾತ್ವಕಾಂಕ್ಷೆ ನಮ್ಮಲ್ಲಿರಬೇಕು. ದೊಡ್ಡ ಕನಸುಗಳನ್ನು ಕಂಡಾಗ ಉನ್ನತ ಸ್ಥಾನದ ಹಾದಿ ತಲುಪಲು ಸಹಾಯಕವಾಗುತ್ತದೆ. ಸವಾಲುಗಳನ್ನು ಮೆಟ್ಟಿ ನಿಂತು ದೇಶವ್ಯಾಪಿ ಕನ್ನಡಿಗರು ಗುರಿ ಸಾಧಿಸುವಂತಾಗಬೇಕು ಎಂದರು.

ಬಾಲ್ಯದಲ್ಲೇ ಕಣ್ಣುಗಳೆರಡನ್ನೂ ಕಳೆದುಕೊಂಡು ಅಂಧತ್ವದ ನಡುವೆಯೂ 2016ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 340ನೇ ಶ್ರೇಣಿಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಿದ್ದು ಶಿಕ್ಷಣದಿಂದ. ಅದರ ಮೌಲ್ಯವನ್ನು ಅರಿತು ಸಾಗಬೇಕು. ಕೆಲವು ವರ್ಷ ಸತತ ಪರಿಶ್ರಮದಿಂದ ಅಧ್ಯಯನ ನಡೆಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾದರೆ ಮುಂದೆ ನೀವು ಹಾಗೂ ನಿಮ್ಮ ಕುಟುಂಬ ಆ ಉದ್ಯೋಗದ ನೆರಳಲ್ಲಿ ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದರು.

ಸಾಧನೆ ಸಾಕಾರಗೊಳಿಸಲು ತರಬೇತಿ ಅತ್ಯಗತ್ಯ. ಇಲ್ಲಿ ನಮ್ಮ ಧನಾತ್ಮಕ ಹಾಗೂ ಋಣಾತ್ಮಕ ಅಂಶ ತಿಳಿದುಕೊಳ್ಳಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪವೂ ಇಂದು ಬದಲಾಗಿದೆ. ಈ ಹಿಂದೆ ಸಾಮಾನ್ಯಜ್ಞಾನ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು ಹೆಚ್ಚಿದ್ದವು. ಆದರೆ ಇಂದು ಪ್ರಚಲಿತ ವಿದ್ಯಮಾನ ಮತ್ತು ನಮ್ಮ ನಿರ್ಣಯ ಶಕ್ತಿಗಳನ್ನು ನಿರ್ಧರಿಸುವ ಪ್ರಶ್ನೆ ಹೆಚ್ಚು ಕೇಳುತ್ತಿದ್ದಾರೆ. ಹೀಗಾಗಿ ನೀವು ಆ ರೀತಿಯ ಪ್ರಶ್ನೆಗಳಿಗೆ ತಯಾರಿ ನಡೆಸಬೇಕು ಎಂದು ಸಲಹೆ ನೀಡಿದರು.

ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಗ್ರಾಮೀಣ ಯುವಕ-ಯುವತಿಯರಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ತೆರೆದು ದೇಶದ ಅತ್ಯುನ್ನತ ಹುದ್ದೆಗಳಿಗೆ ತರಬೇತಿ ನೀಡಲು ತೀರ್ಮಾನಿಸಿದೆ. ಈ ಸಾಲಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಿವಿಗೆ ಸೇರ್ಪಡೆ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಎಲ್ಲ ಭಾಗದಲ್ಲಿಯೂ ಪ್ರವಾಸ ಕೈಗೊಂಡು ಪ್ರಚಾರ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆನ್‌ಲೈನ್ ಕೋರ್ಸ್ ತೆರೆಯಲಾಗುವುದು ಎಂದರು.

ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮೀ, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ, ಪರೀಕ್ಷಾಂಗ ಕುಲಸಚಿವರ ಪ್ರೊ.ಕೆ.ಬಿ ಪ್ರವೀಣ, ಅಧ್ಯಯನ ಕೇಂದ್ರದ ಡೀನ್ ಪ್ರೊ.ರಾಮನಾಥಂ ನಾಯ್ಡ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ, ತರಬೇತಿ ಕೇಂದ್ರದ ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ.ಕೊಪ್ಪಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net