

ಬೀದರ್: ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪದವಿ ಪಠ್ಯಕ್ರಮ ಓದುವ ಜತೆಗೆ ಯುಪಿಎಸ್ಸಿ, ಕೆಪಿಎಸ್ಸಿಯಿಂದ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ನಡೆಸಿದಾಗ ಮಾತ್ರ ಉನ್ನತ ಹುದ್ದೆಗಳ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಡಾ.ಸತೀಶಕುಮಾರ ಹೇಳಿದರು.
ಜ್ಞಾನಸುಧಾ ಸಿವಿಲ್ ಸರ್ವಿಸ್ ಅಕಾಡೆಮಿಯಿಂದ ಇಲ್ಲಿನ ಜ್ಞಾನಸುಧಾ ಕಾಲೇಜಿನಲ್ಲಿ ಆಯೋಜಿಸಿದ್ದ ಯುಪಿಎಸ್ಸಿ, ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾಗರಿಕ ಸೇವಾ ಹುದ್ದೆಗಳಂಥ ಉನ್ನತ ಹುದ್ದೆ ಸೇರಿದಂತೆ ಯಾವುದೇ ಸರ್ಕಾರಿ ಉದ್ಯೋಗ ಪಡೆಯಬೇಕೆಂದರೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು. ಹೀಗಾಗಿ ಪದವಿ ವಿದ್ಯಾರ್ಥಿಗಳು ತಮ್ಮ ದಿನ ನಿತ್ಯದ ಓದಿನ ಜತೆಯಲ್ಲಿ ಸ್ಪರ್ಧಾತ್ಮಕ ಪಠ್ಯಕ್ರಮವನ್ನು ಓದಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಉನ್ನತವಾದ ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಛಲ ಬೆಳೆಸಿಕೊಳ್ಳಬೇಕು. ಪ್ರಯತ್ನದಲ್ಲಿ ತೊಡಗಿಸಿಕೊಂಡಾಗ ಹಲವು ಅಡೆತಡೆಗಳು ಬರುತ್ತವೆ. ವಿಫಲವಾದರು ಸಹ ಆತ್ಮವಿಶ್ವಾಸ ಕಳೆದುಕೊಳ್ಳದೆ ಪ್ರಯತ್ನ ಮಾಡಬೇಕು ಎಂದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕ ಡಾ.ನೀಲಾಂಬಿಕಾ ವೀರಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಕಷ್ಟಪಟ್ಟು ಓದಿದರೆ ಭವಿಷ್ಯದಲ್ಲಿ ಉನ್ನತ ಹುದ್ದೆ ಪಡೆದುಕೊಳ್ಳಬಹುದು. ವಿದ್ಯಾರ್ಥಿ ಜೀವನ ಆರಾಮವಾಗಿ ಕಳೆದರೆ ಭವಿಷ್ಯದಲ್ಲಿ ಕಷ್ಟದ ಬದುಕು ನಡೆಸಬೇಕಾಗುತ್ತದೆ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಬಾಲಾಜಿ ಪಾಟೀಲ್ ಮಾತನಾಡಿ, ಇಂಜಿನಿಯರ್, ಡಾಕ್ಟರ್ ಆಗಬೇಕು ಎಂಬ ಗುರಿ ಮಾತ್ರ ಹಲವು ವಿದ್ಯಾರ್ಥಿಗಳು ಇಟ್ಟುಕೊಳ್ಳುತ್ತಾರೆ. ಈ ಎರಡು ಬಿಟ್ಟು ಇತರೆ ಕ್ಷೇತ್ರಗಳಲ್ಲಿ ಹಲವು ಅವಕಾಶಗಳು ಇವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸತತ ಅಧ್ಯಯನದೊಂದಿಗೆ ಆತ್ಮವಿಶ್ವಾಸ ಮುಖ್ಯ ಎಂದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಡಾ.ಪೂರ್ಣಿಮಾ ಜಿ. ಮಾತನಾಡಿದರು. ಅಕಾಡೆಮಿ ನಿರ್ದೇಶಕ ಬಾಲಾಜಿ ಮಾನಕರಿ ಸ್ವಾಗತಿಸಿ ನಿರೂಪಣೆ ಮಾಡಿದರು. ಜ್ಞಾನಸುಧಾ ಕಾಲೇಜಿನ ಪ್ರಾಚಾರ್ಯ ಚನ್ನವೀರ ಪಾಟೀಲ್ ವಂದಿಸಿದರು.
ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು ಎಂಬ ಉದ್ದೇಶದಿಂದ ಜ್ಞಾನಸುಧಾ ಸಿವಿಲ್ ಸರ್ವಿಸ್ ಅಕಾಡೆಮಿ ಆರಂಭಿಸಿ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ ಆಕಾಂಕ್ಷಿಗಳು ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು.| ಡಾ.ಪೂರ್ಣಿಮಾ ಜಿ.ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕೆ