

ಭಾಲ್ಕಿ: ಪತ್ರಿಕೆಗಳು ಸಮಾಜದ ಬೆಳವಣಿಗೆಗೆ ಪೂರಕವಾಗುವ ಜತೆಗೆ ವಿದ್ಯಾರ್ಥಿ ಜೀವನದ ಏಳಿಗೆಗೂ ಸಹಕಾರಿ ಆಗಿವೆ ಎಂದು ಬಿಕೆಐಟಿ ಪ್ರಾಚಾರ್ಯ ಡಾ.ನಾಗಶೆಟೆಪ್ಪ ಬಿರಾದಾರ ಹೇಳಿದರು.
ಪಟ್ಟಣದ ನಿರ್ಮಲಾ ಕ್ರಿಯೆಟಿವ್ ಸ್ಟಡೀಸ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ಸಾಮಾನ್ಯ ಜ್ಞಾನ ಹೆಚ್ಚಿಸಲು, ವಿದ್ಯಾರ್ಥಿಗಳ ಕೋರ್ಸ್ ಆಯ್ಕೆ, ಐಎಎಸ್, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಲು ಪತ್ರಿಕೆಗಳು ಉಪಯುಕ್ತ ಮಾಹಿತಿ ನೀಡುತ್ತವೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿ, ಇಂದಿನ ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ಪತ್ರಿಕೆಗಳು ವಸ್ತುನಿಷ್ಠ ಸುದ್ದಿ ನೀಡುವಲ್ಲಿ ಮುಂಚೂಣಿಯಲ್ಲಿವೆ. ಓದುಗರು ಇಂದಿಗೂ ಪತ್ರಿಕೆಗಳ ಮೇಲೆ ವಿಶ್ವಾಸ ಉಳಿಸಿಕೊಂಡಿದ್ದಾರೆ. ಪೈಪೋಟಿ ಎದುರಾದರೂ ಪತ್ರಿಕೆಗಳು ಅಳಿಯುವುದಿಲ್ಲ. ಸೂರ್ಯ ಚಂದ್ರ ಇರುವವರೆಗೂ ಮುದ್ರಣ ಮಾಧ್ಯಮ ಇರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟೆ, ಕಸಾಪ ತಾಲೂಕು ಕೋಶಾಧ್ಯಕ್ಷ ರಾಜಕುಮಾರ ಸಾಲಿ ಮಾತನಾಡಿದರು. ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲ್ಮಂಡಗೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜಪ್ಪ ಪಾಟೀಲ್, ಪ್ರಮುಖರಾದ ಕಾಶೀನಾಥ ಲದ್ದೆ, ಮಲ್ಲಿಕಾರ್ಜುನ ಕುಂಚಗೆ, ಗಣಪತಿ ಬೋಚರೆ, ಡಾ.ಸೋಮನಾಥ ನುಚ್ಚಾ, ಸುಭಾಷ ಹುಲಸೂರೆ, ಚಂದ್ರಕಾ0ತ ತಳವಾಡೆ, ಐಜಿಕ ಬಂಗಾರೆ ಇತರರಿದ್ದರು.
ಅರ್ಚನಾ, ಭಾಗ್ಯಲಕ್ಷಿ ಸ್ವಾಗತ ಗೀತೆ ಹಾಡಿದರು. ಅಮರ ಹಲ್ಮಂಡಗೆ ಸ್ವಾಗತಿಸಿದರು. ಹಣಮಂತ ಕಾರಾಮುಂಗೆ ನಿರೂಪಣೆ ಮಾಡಿದರು. ಸಂತೋಷ ಬಿಜಿ ಪಾಟೀಲ್ ವಂದಿಸಿದರು.