ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾದ ನರೇಗಾ

20230718_181402
Published on

ಕೊಪ್ಪಳ: ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ನಿವಾಸಿ ಶಾಮೀದ್ ಸಾಬ್ ಗಂಗನಾಳ್‌ಗೆ ನರೇಗಾ ನೆರವಾಗಿದೆ.

ಬಿಎ, ಬಿಇಡಿ ವಿದ್ಯಾಭ್ಯಾಸ ಮಾಡಿರುವ ಶಾಮೀದ್ ಸಾಬ್ ನಾಲ್ಕೈದು ವರ್ಷಗಳ ಹಿಂದೆ ತಮ್ಮ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ. ಆದರೆ, ಕರೊನಾ ಕಾರಣ ಶಾಲೆ ಮುಚ್ಚಿದ ಪರಿಣಾಮ ಇದ್ದ ಕೆಲಸ ಕಳೆದುಕೊಳ್ಳಬೇಕಾಯಿತು. ಏಕಾಏಕಿ ಎದುರಾದ ಪರಿಸ್ಥಿತಿಯಿಂದ ಕುಗ್ಗಿದ್ದ ಶಾಮೀದ್ ಸಾಬ್‌ಗೆ ನರೇಗಾ ಕೆಲಸ ಜೀವನಕ್ಕೆ ನೆರವಾಗಿದೆ. ಇವರ ತಾಯಿ ನರೇಗಾ ಕೆಲಸಕ್ಕೆ ಹೋಗುತ್ತಿದ್ದರಿಂದ ತಾನೂ ಅವರೊಡನೆ ಕೆರೆ, ನಾಲಾ, ಕಿರು ಕಾಲುವೆಗಳ ಹೂಳೆತ್ತುವ ಕೆಲಸಕ್ಕೆ ಹೋಗಲು ಆರಂಭಿಸಿದ.

ಶಿಕ್ಷಕನಾಗಿ ಪಾಠ ಮಾಡಿದಾತ ಹೂಳೆತ್ತುವ ಕೆಲಸಕ್ಕೆ ಹೊಂದಿಕೊಳ್ಳಲು ಆರಂಭದಲ್ಲಿ ಕಷ್ಟವಾದರೂ ದಿನಕಳೆದಂತೆ ಅಭ್ಯಾಸವಾಗಿದೆ. 2021-22 ನೇ ಸಾಲಿನಲ್ಲಿ 35 ದಿನ ಕೆಲಸ ಮಾಡಿದ್ದು, 10,203 ರೂ, 2022-23ರಲ್ಲಿ 28 ದಿನ ಕೆಲಸ ಸಿಕ್ಕಿದ್ದು, 7,427 ರೂ. 2023-24 ನೇ ಸಾಲಿನಲ್ಲಿ 28 ಮಾನವ ದಿನಗಳನ್ನು ಸೃಜಿಸಿ 8,309 ರೂ. ಕೂಲಿ ಪಡೆದಿದ್ದಾನೆ. ಕೆಲಸದ ಬಿಡುವಿನ ಸಮಯದಲ್ಲಿ ಗ್ರಾಪಂ, ತಾಪಂ ಹಾಗೂ ಜಿಪಂನಿಂದ ಹಮ್ಮಿಕೊಳ್ಳುವ ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾನೆ. ಜತೆಗೆ ಸ್ಪರ್ಧಾತ್ಮ ಪರೀಕ್ಷಗೆ ತಯಾರಿ ನಡೆಸಿದ್ದು, ನರೇಗಾದಿಂದ ಓದಿಗೆ ಬೇಕಾದ ಖರ್ಚು, ವೆಚ್ಚ ನಿಭಾಯಿಸುತ್ತಿದ್ದಾನೆ.

ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಾಭಿಮಾನದ ಬದುಕು ನಡೆಸಲು ನರೇಗಾ ಸಹಕಾರಿಯಾಗುತ್ತಿದೆ. ಮಧ್ಯಾಹ್ನದವರೆಗೂ ನರೇಗಾ ಕೆಲಸ ಮಾಡಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ನರೇಗಾ ಕೆಲಸಗಳು ಯಶಸ್ವಯಾಗಲಿ. -ಶಾಮೀದ್ ಸಾಬ್ ಗಂಗನಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net