ಸ್ಪರ್ಧಾತ್ಮಕ ಪರೀಕ್ಷೆಗೆ ಕನ್ನಡದ ಕನ್ನಡಿ ಉಪಯುಕ್ತ

21
Published on

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವವರಿಗೆ ‘ಕನ್ನಡದ ಕನ್ನಡಿ’ ಉಪಯುಕ್ತ ಕೃತಿಯಾಗಿದೆ ಎಂದು ಹನೂರು ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಕಂದವೇಲು ಅಭಿಪ್ರಾಯಪಟ್ಟರು.

ಸನ್ವಿತಿ ಪ್ರಕಾಶನ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಸಪ್ಪ ಸಿ. ಸಾಲುಂಡಿ ಅವರ ‘ಕನ್ನಡದ ಕನ್ನಡಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡಿಯಲ್ಲಿ ಪೂರ್ಣ ದೇಹ ಕಾಣಿಸುವುದಿಲ್ಲ. ಮುಖ ಮಾತ್ರ ಕಾಣಿಸುತ್ತದೆ. ಅದೇ ರೀತಿ ಈ ಕೃತಿಯಲ್ಲಿ ಸಾಹಿತ್ಯದ ಮುಖ ತೋರಿಸಿದ್ದಾರೆ. ಇದರಲ್ಲಿ ವ್ಯಾಕರಣ, ಛಂದಸ್ಸು, ಗ್ರಂಥ, ಕವಿ ಪರಿಚಯ… ಹೀಗೆ ಎಲ್ಲವೂ ಇದೆ ಎಂದರು.

ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ.ಎಚ್. ಮಹದೇವಸ್ವಾಮಿ ಮಾತನಾಡಿ, ಕನ್ನಡದ ಕನ್ನಡಿ ಕೃತಿ ಎಸ್‌ಡಿಎ, ಎಫ್‌ಡಿಎ, ಪೊಲೀಸ್ ಪೇದೆ ನೇಮಕಾತಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ ಎಂದು ತಿಳಿಸಿದರು.


ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ.ಎಂ. ಕಾಂತರಾಜ್ ಮಾತನಾಡಿ, ಸಮಯ ಸದುಪಯೋಗ ಮಾಡಿಕೊಂಡರೆ ಏನು ಬೇಕಾದರೂ ಸಾಧನೆ ಮಾಡಬಹುದು. ಕನ್ನಡ ಮತ್ತು ಸಾಹಿತ್ಯ ಎಲ್ಲರಿಗೂ ಬೇಕು ಎಂದು ಅಭಿಪ್ರಾಯಪಟ್ಟರು.


ಪ್ರಶಸ್ತಿ ಪ್ರದಾನ- ಗುರುವಂದನೆ:
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮೈಸೂರು ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ಮುಕ್ತ ವಿವಿ ಎಂಬಿಎ ಕಾರ್ಯಕ್ರಮ ಸಂಯೋಜಕ ಪ್ರೊ.ಸಿ.ಮಹದೇವಮೂರ್ತಿ, ಮೈಸೂರು ವಿವಿ ಸಾವಯವ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಬಸಪ್ಪ, ಕೆಜಿಐಡಿಯ ನಿವೃತ್ತ ನೌಕರ ರಾಜು ಅವರಿಗೆ 2021-22ನೇ ಸಾಲಿನ ರಾಜ್ಯ ಮಟ್ಟದ ಸನ್ವಿತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಚ್.ಕೆ. ಪ್ರಭಾಕರಮೂರ್ತಿ, ಎಂ. ವೆಂಕೋಬರಾವ್, ಪ್ರೊ.ನೀ.ಗಿರಿಗೌಡ, ಮಾದಪ್ಪ ಸ್ವಾಮಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.


ಬಿಜೆಪಿಯ ಎನ್. ಅರುಣ್‌ಕುಮಾರ್‌ಗೌಡ , ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸೇಪಿಯಂಟ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಅಂಬಾಳೆ ಮಹದೇವಸ್ವಾಮಿ, ಉಪನ್ಯಾಸಕಿ ಜಿ. ಲಕ್ಷ್ಮೀ, ಸಹಾಯಕ ಪ್ರಾಧ್ಯಾಪಕ ಬಸಪ್ಪ ಸಿ. ಸಾಲುಂಡಿ, ನೇಹಾ ಮೂರ್ತಿ, ಸಿ.ಟಿ. ಕೀರ್ತಿಕುಮಾರ್, ಬಲ್ಲೇನಹಳ್ಳಿ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net