ಸ್ಪರ್ಧಾತ್ಮಕ ಪರೀಕ್ಷೆಗಳ ಭಯಬೇಡ

14BTP01
Published on

ಬೆಟ್ಟದಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಿಗುವ ತರಬೇತಿಗಳ ಸದುಪಯೋಗ ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಧೈರ್ಯ ಹೊಂದಬೇಕು ಎಂದು ಮೈಸೂರಿನ ಗ್ಲೋಬಲ್ ಕಾಂಪೇಟೆಟಿವ್ ಅಕಾಡೆಮಿ ಸಂಸ್ಥಾಪಕ ಕೆ.ರಾಜೇಶ್ ಹೇಳಿದರು.

ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ಪ್ಲೇಸ್ಮೆಂಟ್ ಸೆಲ್ ವತಿಯಿಂದ ಗುರುವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಬೆನ್ನೆಲುಬು ಯುವಶಕ್ತಿ ಆಗಿದೆ. ಯುವ ಸಮೂಹ ಜವಾಬ್ದಾರಿಯನ್ನು ಅರಿತು ತಮಗೆ ಕೊಟ್ಟ ಕೆಲಸಗಳನ್ನು ನಿಷ್ಠೆಯಿಂದ ಮಾಡಿ ದೇಶ ಹಾಗೂ ಸಮಾಜ ಕಟ್ಟಲು ಮುಂದೆ ಬರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಪಡೆದು ಪೂರ್ವ ತಯಾರಿಯೊಂದಿಗೆ ಗುರಿ ಸಾಧಿಸಲು ಮುಂದಾಗಬೇಕು ಎಂದು ಹೇಳಿದರು.

ಪದವಿ ನಂತರ ಸಿಗುವಂತಹ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಬೇಕು. ಆಧುನಿಕ ಕಾಲಘಟ್ಟದ ಜ್ಞಾನದ ಅರಿವು ಹೊಂದಿರಬೇಕು. ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧಪಟ್ಟಂತೆ ಹಿಂದಿನ ಪ್ರಶ್ನೆ ಪತ್ರಿಕೆಗಳು, ಪ್ರಮುಖ ಲೇಖಕರು ಬರೆದಿರುವ ಪುಸ್ತಕಗಳನ್ನು ಓದಬೇಕು. ಪರೀಕ್ಷೆ ಭಯಬಿಟ್ಟು ಆತ್ಮವಿಶ್ವಾಸ ಸದಾ ನಮ್ಮಲ್ಲಿ ಇರಬೇಕು. ಕಾಲೇಜಿನ ಅಧ್ಯಾಪಕರು ಗುರುತಿಸುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗೆ ನಮ್ಮ ಸಂಸ್ಥೆ ವತಿಯಿಂದ ಉಚಿತ ಪ್ರವೇಶಾತಿ ಮತ್ತು ತರಬೇತಿ ನೀಡಲಾಗುವುದು ಎಂದರು.

ಕಾಲೇಜಿನ ಪ್ರಾಧ್ಯಾಪಕ ಡಾ.ಎಸ್.ಕೆ.ಮಂಜು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಆತಂಕ ಬಿಟ್ಟು ಭರವಸೆ ಹೆಚ್ಚಿಸಿಕೊಳ್ಳಿ. ಏಕಾಗ್ರತೆ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಸಮಯಪಾಲನೆ, ನೆನಪಿನ ಶಕ್ತಿ, ಪರೀಕ್ಷೆ ಬರೆಯುವ ತಂತ್ರ ಕಲಿತರೆ ಗೆಲುವು ನಿಮ್ಮದಾಗಿರುತ್ತೆ. ಪರೀಕ್ಷೆ ಬಗ್ಗೆ ತಿಳಿವಳಿಕೆ ಇರಬೇಕು. ಪಠ್ಯಕ್ರಮ, ಪರೀಕ್ಷೆ ಮಾದರಿ, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಅಧ್ಯಯನದ ಜತೆಗೆ ಪ್ರತಿನಿತ್ಯ ದಿನಪತ್ರಿಕೆ, ನಿಮ್ಮಿಷ್ಟದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಎಚ್.ಪ್ರಶಾಂತ್, ಐಕ್ಯೂಎಸಿ ಸಂಚಾಲಕ ಶಾಕೀರ್, ಪ್ಲೇಸ್ಮೆಂಟ್ ಸಮಿತಿ ಸಂಚಾಲಕ ರಘುವೀರ್, ಪ್ರಾಧ್ಯಾಪಕರಾದ ಡಾ.ಎಸ್.ಕೆ ಮಂಜು, ಮಮತಾಶ್ರೀ, ಶಾಂಭವಿ, ಅಂತಿಮ ಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net