ಸ್ಪರ್ಧಾತ್ಮಕ ಪರೀಕ್ಷೆಎದುರಿಸಿ

20M.D.R.4
Published on

ಮದ್ದೂರು: ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಂಡು ವ್ಯಾಸಂಗ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಅಧಿಕಾರಿಗಳಾಗಬಹುದು ಎಂದು ರಾಮನಗರದ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಹೇಳಿದರು.
ಟಿ.ಬಳ್ಳೇಕೆರೆ ಗ್ರಾಮದ ಗ್ರೀನ್‌ವುಡ್ ಶಾಲೆಯ 12ನೇ ವಾರ್ಷಿಕೋತ್ಸವ, ಹಸಿರೋತ್ಸವ ಮತ್ತು ಸೋಮನಹಳ್ಳಿಯ ನಂದಿನಿ ಹಾಗೂ ಹುಚ್ಚೇಗೌಡ ದಂಪತಿಗೆ ಹಸು ಕೊಡುಗೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರೀನ್‌ವುಡ್ ಶಾಲೆಯ ಗ್ರಾಮೀಣ ವಿದ್ಯಾರ್ಥಿಗಳು ಸ್ಪಷ್ಟವಾಗಿ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಮಾತನಾಡುವುದನ್ನು ನೋಡಿದರೆ ಶಿಕ್ಷಕರ ಶ್ರಮ ಮತ್ತು ವಿದ್ಯಾರ್ಥಿಗಳ ಬದ್ಧತೆ ಅರ್ಥವಾಗುತ್ತದೆ ಎಂದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಅಕ್ಷರಂ ವೆಂಕಟೇಶ್ ಮಾತನಾಡಿ, ಶಾಲಾ ವಾರ್ಷಿಕೋತ್ಸವ ಸಂದರ್ಭ ಅಗತ್ಯ ಇರುವವರಿಗೆ ಗೋದಾನ ಮಾಡುವುದನ್ನೂ ಒಂದು ವಿಶೇಷ ಚಟುವಟಿಕೆಯಾಗಿ ರೂಪಿಸಿದ್ದೇವೆ ಎಂದು ಹೇಳಿದರು. ಈ ಶಾಲೆಯಲ್ಲಿ ಅಧ್ಯಯನ ಮಾಡಿದ ಅನೇಕ ಮಕ್ಕಳು ಇಂದು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಬಹುಮಾನ ವಿತರಣೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಶಾಲೆಯ ವಿದ್ಯಾರ್ಥಿನಿ ಎಂ.ಎಸ್. ಪೂರ್ವಿ ಅವರಿಗೆ ಸಂಸ್ಥೆ ವತಿಯಿಂದ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಲಾಯಿತು.
ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಡೆಸಿಕೊಟ್ಟರು. ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮನ್‌ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ ಸ್ವಾಮಿ, ಸಂಸ್ಥೆಯ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಬೆಟ್ಟಸ್ವಾಮಿ, ಬಿಇಒ ಕಾಳೀರಯ್ಯ, ಮುಖ್ಯ ಶಿಕ್ಷಕಿ ಹರ್ಷಿತಾ, ಗ್ರಾ.ಪಂ. ಸದಸ್ಯರಾದ ಸುರೇಶ್, ಮುಖಂಡರಾದ ಉಮೇಶ್, ಚಂದ್ರು, ಚೆಲುವಪ್ಪಾಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net