ಸ್ಪರ್ಧಾತ್ಮಕ ಪರೀಕ್ಷೆ ಯಶಸ್ಸಿಗೆ ಪತ್ರಿಕೆಗಳು ಸಹಕಾರಿ

CTD 21 NEWS JAGRAUTI--0008
Published on

ಚಿತ್ರದುರ್ಗ: ಪಠ್ಯದ ಜತೆ ಸಾಮಾನ್ಯ ಜ್ಞಾನಕ್ಕಾಗಿ ದಿನ ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಬಹುದು ಎಂದು ಸುನೀತಾ ನರ್ಸಿಂಗ್ ಹೋಂನ ಡಾ.ಜಿ.ಎನ್. ಸಂದೀಪ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ಸಮಾಜ ಸೇವಾ ಸಂಘ ನಗರದ ಅಹಮದ್ ಪ್ಯಾಲೇಸ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಾಲಾ-ಕಾಲೇಜು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ನಡುವೆ ವ್ಯತ್ಯಾಸವಿದೆ. ಸಾಕಷ್ಟು ಸಿದ್ಧತೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು ಎಂದರು.
ನಗರದ ಮಸ್ಜಿದ್-ಎ-ಆಜಂ ಸಂಸ್ಥೆ ಅಧ್ಯಕ್ಷ ಮಹಮದ್ ಸಾದಿಕ್‌ವುಲ್ಲಾ ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯವಶ್ಯಕವೆಂದು ಪ್ರವಾದಿಗಳು ಹೇಳಿದ್ದಾರೆ. ವೀರಸನ್ಯಾಸಿ ಸ್ವಾಮಿ ವಿವೇಕಾನಂದರು ಜ್ಞಾನವೇ ಬೆಳಕು ಎನ್ನುವ ಸಂದೇಶ ನೀಡಿದ್ದಾರೆ. ಪಠ್ಯಪುಸ್ತಕಗಳ ಜತೆ ಕಠಿಣ ಪರಿಶ್ರಮ ಹಾಗೂ ಸತತ ಅಭ್ಯಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬಹುದು. ಕಾಲಹರಣ ಮಾಡುವ ಬದಲು ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಮ್ಮೆ ವಿಫಲವಾದರೂ ಸತತ ಪ್ರಯತ್ನದ ಮೂಲಕ ಯಶಸ್ಸು ಸಾಧಿಸಬೇಕು ಎಂದರು.
ಕರ್ನಾಟಕ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಮದ್‌ಸೈಫುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಫಾತಿಮಾ ಮಸೀದಿ ಅಧ್ಯಕ್ಷ ಜಿಕ್ರಿಯಾಸಾಬ್, ಜಾಮಿಯಾ ಮಸೀದಿ ಮಾಜಿ ಉಪಾಧ್ಯಕ್ಷ ಮಹಮದ್ ವಜೀರ್‌ಸಾಬ್, ಬಡಾಮಕಾನ್ ದರ್ಗಾ ಕಮಿಟಿ ಅಧ್ಯಕ್ಷ ಸೈಯದ್ ಮುಜೀಬ್, ಸಿಟಿ ಆರ್ಥೋಪೆಡಿಕ್ ಕ್ಲಿನಿಕ್‌ನ ಡಾ. ಮಹಮದ್ ಖಲೀಲ್‌ಖಾನ್ ಇದ್ದರು. ಎಂ. ಹನೀಫ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net