ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಮುಖ್ಯ

mysore
Published on

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಮುಖ್ಯ ಎಂದು ದಕ್ಷಿಣ ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 50 ದಿನಗಳ ಐಎಎಸ್ ಹಾಗೂ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿದೆ. ಯಾವುದೇ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿ, ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ. ಸರ್ಕಾರಿ ನೌಕರಿಗಿರುವ ಸೆಳೆತ ಅಂತಹದ್ದು. ಕಠಿಣ ಪರಿಶ್ರಮವಿದ್ದರೆ ಇಂತಹ ಉದ್ಯೋಗ ಪಡೆಯಬಹುದು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾನು ಕೂಡ ಹಳ್ಳಿಯಲ್ಲೇ ಹುಟ್ಟಿ ಬೆಳೆದು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದಿ ಯುಪಿಎಸ್‌ಸಿ ಪರೀಕ್ಷೆ ತಯಾರಿಗೆ ದೆಹಲಿಗೆ ಹೋಗಿದ್ದೆ. ಇಲ್ಲಿ ಬಹುತೇಕರು ಗ್ರಾಮೀಣ ಭಾಗದವರೇ ಇದ್ದೀರಿ. ಶ್ರಮ ಪಟ್ಟು ಓದಿ. ಪ್ರಸ್ತುತ ಪರೀಕ್ಷೆ ತಯಾರಿಗೆ ದೆಹಲಿಗೆ ಹೋಗಬೇಕೆಂದಿಲ್ಲ ಎಂದರು.

ಹಾರ್ಡ್‌ವರ್ಕ್ ಮತ್ತು ಪರಿಶ್ರಮದ ಜತೆಗೆ ಓದಿನಲ್ಲಿ ತಯಾರಿ ಇರಲಿ. ನಿದ್ರೆಯು ಮುಖ್ಯ. ನಿದ್ದೆಗೆಟ್ಟಿ ಓದುವುದು ಬೇಡ. ಎಲ್ಲದಕ್ಕೂ ಸಮಯಪಾಲನೆ ಇದ್ದರೆ ಒಳಿತು. ತಯಾರಿ ಸಮಯದಲ್ಲಿ ವಿದ್ಯಾರ್ಥಿಗಳು ಗುಂಪು ರಚಿಸಿಕೊಂಡು ಆಯ್ಕೆವಾರು ವಿಷಯಗಳನ್ನು ಚರ್ಚಿಸಿ. ಸಾಧ್ಯವಾದಷ್ಟು ಸಾಮಾಜಿಕ ಜಾಲತಾಣದ ಗೀಳಿನಿಂದ ದೂರವಿದ್ದು, ದೈನಂದಿನ ದೈಹಿಕ ಚಟುವಟಿಕೆ ಕಡೆಗೆ ಗಮನಹರಿಸಬೇಕು ಎಂದರು.

ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆ ಕುರಿತು ಮಾತನಾಡಿದ ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಜಿ.ಎಸ್.ಸೋಮಶೇಖರ್, ಪರೀಕ್ಷೆ ಎದುರಿಸುವುದಕ್ಕೆ ದೃಢ ಮನಸ್ಸು ಇರಬೇಕು. ಆತ್ಮವಿಶ್ವಾಸ, ಸಮಯ ಪಾಲನೆ, ನೆನಪಿನ ಶಕ್ತಿ, ಪರೀಕ್ಷೆ ಬರೆಯುವ ತಂತ್ರ ಕಲಿತರೆ ಗೆಲುವು ನಿಮ್ಮದು ಎಂದು ಶಿಬಿರಾರ್ಥಿಗಳಿಗೆ ಹೇಳಿದರು

ನಾವು ಸಾವಿರ ಜನರಿಗಿಂತ ಮುಂದೆ ಇದ್ದೀವಿ ಎನ್ನುವ ಭರವಸೆ ಇರಲಿ. ಪರೀಕ್ಷೆ ಬರೆದ ಮೊದಲ ಬಾರಿಯೇ ಆಯ್ಕೆಯಾಗಬೇಕು ಎನ್ನುವ ಛಲ ಇರಲಿ. ಆದರೆ ಆಗದೆ ಇದ್ದಾಗ ಛಲ ಬಿಡದೆ ಮತ್ತೆ ಮತ್ತೆ ಪ್ರಯತ್ನಿಸಬೇಕು ಎಂದರು.

ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದರೆ ಇನ್ನಿತರ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗೂ ಅನುಕೂಲವಾಗಲಿದೆ. ದಿನದ 24 ಗಂಟೆಯನ್ನು ವಿಂಗಡಿಸಿಕೊಂಡು ಸಮಯ ಪರಿಪಾಲಿಸಿ ಎಂದು ಹೇಳಿದರು.

ಪರೀಕ್ಷೆ ಬಗ್ಗೆ ತಿಳಿವಳಿಕೆ ಇರಬೇಕು. ಪಠ್ಯಕ್ರಮ, ಪರೀಕ್ಷೆ ಮಾದರಿ, ಹಿಂದಿನ ವರ್ಷದ ಪ್ರಶ್ನೆ ಪ್ರತ್ರಿಕೆಗಳ ಅಧ್ಯಯನದ ಜತೆಗೆ ನಿತ್ಯ ದಿನಪತ್ರಿಕೆ, ನಿಮ್ಮಿಷ್ಟದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ವಿದ್ಯಾರ್ಥಿಗಳು ಸತತ ಪ್ರಯತ್ನಪಟ್ಟು ಓದಬೇಕು. ನಿಮ್ಮ ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯ. ಶಿಕ್ಷಣ ಉದ್ಯೋಗದ ಜತೆಗೆ ಶಿಸ್ತನ್ನು ಕಲಿಸುತ್ತದೆ. ಅಂಬೇಡ್ಕರ್ ಅವರು ಕಷ್ಟಪಟ್ಟಿ ಓದಿ ವಿಶ್ವಜ್ಞಾನಿ ಆಗಿದ್ದಾರೆ. ನಿರಂತರ ಪರಿಶ್ರಮದಿಂದ ಮಾತ್ರ ಇದೆಲ್ಲ ಸಾಧ್ಯ. ಹೀಗಾಗಿ, ನಿಮ್ಮ ಓದು ನಿರಂತರವಾಗಿರಲಿ ಎಂದು ತಿಳಿಸಿದರು.

ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಎಚ್.ವಿಶ್ವನಾಥ್, ಹಣಕಾಸು ಅಧಿಕಾರಿ ಪ್ರೊ.ನಿರಂಜನ್ ರಾಜ್, ಅಧ್ಯಯನ ಕೇಂದ್ರದ ಡೀನ್ ಪ್ರೊ. ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ. ಕೊಪ್ಪಲ್, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net