

ಮೈಸೂರು: ವೇಗವಾಗಿ ಓಡುತ್ತಿರುವ ಸ್ಪರ್ಧಾ ಜಗತ್ತಿನ ವೇಗಕ್ಕೆ ಹೊಂದಿಕೊಳ್ಳಲಾಗದೆ ಅನೇಕ ಜನರು ಶಾಂತಿ, ನೆಮ್ಮದಿ, ಸಂತೋಷ ಕಳೆದುಕೊಂಡಿದ್ದಾರೆ. ನಗು, ಶಾಂತಿಯನ್ನು ಹಣಕೊಟ್ಟು ಕೊಳ್ಳಬೇಕಾದ ಪರಿಸ್ಥಿತಿಗೆ ಬಂದು ನಿಂತಿದ್ದೇವೆ ಎಂದು ದೆಹಲಿ ಓಂ ಶಾಂತಿ ರಿಟ್ರೀಟಿ ಸೆಂಟರ್ ಅಧ್ಯಕ್ಷರಾದ ರಾಜಯೋಗಿನಿ ಬ್ರಹ್ಮಕುಮಾರಿ ಆಶಾಜಿ ಬೇಸರ ವ್ಯಕ್ತಪಡಿಸಿದರು.
ಪ್ರಜಾಪಿತ ಬ್ರಹ್ಮಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಯಾದವಗಿರಿ ಘಟಕದ ಜ್ಞಾನ ಪ್ರಕಾಶ ಭವನದಲ್ಲಿ ಭಾನುವಾರ ಆಯೋಜಿಸಿರುವ ‘2023-24: ಸಕಾರಾತ್ಮಕ ಬದಲಾವಣೆಯ ವರ್ಷ ಕಾರ್ಯ ಯೋಜನೆ’ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಎಲ್ಲೆಡೆ ಈಗ ವೇಗ, ಆತುರ ಹೆಚ್ಚಾಗಿದೆ. ಜಗತ್ತು ಸ್ಪರ್ಧೆಗಳ ಹಿಂದೆ ಓಡುತ್ತಿದ್ದು, ಜನರನ್ನು ಅದರ ವೇಗಕ್ಕೆ ಓಡುವಂತಾಗಿದೆ. ಈ ಶೈಲಿಗೆ ಜನರು ಹೊಂದಿಕೊಳ್ಳಲಾಗದೇ ಕೆಲವರು ಹಲವು ಕಾಯಿಲೆಗಳಿಂದ ಬಳಲಿ, ಜೀವನದಲ್ಲಿ ಸಂತೋಷ, ನಗು, ನೆಮ್ಮದಿ ಜೀವನವೇ ಮಾಯವಾಗಿದೆ ಎಂದರು.
ಈಗ ನಗು, ಶಾಂತಿಯನ್ನು ಹಣಕೊಟ್ಟುಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಇವೆಲ್ಲವನ್ನು ಪಡೆದುಕೊಳ್ಳಬೇಕಾದರೆ ಪ್ರತಿಯೊಬ್ಬರು ಒತ್ತಡದ ಜಗತ್ತಿನಿಂದ ಹೊರಬರಬೇಕು. ಶಾಂತಿ ಕಾಪಾಡಿಕೊಂಡು ತಾವು ಮಾಡುವ ವೃತ್ತಿಯಲ್ಲಿ ಯಶಸ್ಸು ಕಾಣಬೇಕು. ಇದರ ಬಗ್ಗೆ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗದಲ್ಲಿ ಅನೇಕ ಅರಿವು ಕಾರ್ಯಕ್ರಮಗಳನ್ನು ಆಯೋಜಿಸತ್ತಿದ್ದು, ಇದರ ಉಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಮಂಡ್ಯ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಅನಾಧಿಕಾಲದಿಂದಲೂ ನಮ್ಮ ದೇಶದಲ್ಲಿ ಯೋಗ, ಧ್ಯಾನದ ಮೂಲಕ ಮನಃಶಾಂತಿಯನ್ನು ಕಂಡುಕೊಳ್ಳಲಾಗಿದೆ. ಮಠಮಾನ್ಯಗಳ ಜತೆಗೆ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಕೂಡಾ ಒತ್ತಡದಲ್ಲಿರುವ ಜನರಿಗೆ ಮನಃಶಾಂತಿ, ನಗು ಹಾಗೂ ಆಧ್ಯಾತ್ಮಿಕತೆ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುತ್ತಿರುವ ಕಾರ್ಯ ಶಾಘ್ಲನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಿನ ಅಮೂಲ್ಯ ಕ್ಷಣಗಳನ್ನು ಸ್ಪರ್ಧೆಯ ಅಮಲಿನಲ್ಲಿ ಮೈಮರೆಯುತ್ತಿರುವ ಯುವಕರಿಗೆ, ಇವುಗಳಿಂದ ಮುಕ್ತಿ ಹೊಂದಲು ಜಾಗೃತಿ ಅಗತ್ಯವಿದೆ. ಈ ಕೆಲಸವನ್ನು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವುದು ಉತ್ತಮ ಸಂಗತಿ. ಯಾರೂ ಏನೇ ಹೇಳಿದರೂ ಭಾರತೀಯ ಪರಂಪರೆಯಲ್ಲಿ ಮಠ-ಮಾನ್ಯಗಳ ಪಾತ್ರ ಹಿರಿದು ಎಂದರು.
ಜೆಎಸ್ಎಸ್ ಆಸ್ಪತ್ರೆಯ ಫಿಸಿಷಿಯನ್ ಡಾ.ಶಿಲ್ಪ ಅವರೇಬೀಳ್ ಮಾತನಾಡಿ, ವೈದ್ಯಕೀಯ ವೃತ್ತಿಯಲ್ಲಿರುವ ನಾನು ದೈನಂದಿನ ಬದುಕಿನ ಜಂಜಾಟಗಳ ನಡುವೆಯೂ ಕರ್ತವ್ಯಕ್ಕೆ ದಿನನಿತ್ಯ ಹಾಜರಾಗುತ್ತೇವೆ. ಆ ಮನಸ್ಥಿತಿಯಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತೇವೆ. ಈ ಮನಸ್ಥಿತಿಯಿಂದ ಹೊರಬಂದು ರೋಗಿಗಳಿಗೆ ಚಿಕಿತ್ಸೆ ನೀಡುವುದು ಹೇಗೆ ಎಂಬುದನ್ನು ‘ರಾಜಯೋಗ ಶಿಬಿರ ಕಲಿಸಿತು. ಹಾಗಾಗಿ ಪ್ರತಿಯೊಬ್ಬರು ಈ ಶಿಬಿರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಯೋಗ, ಧ್ಯಾನ ಶಿಬಿರಗಳ ಬಗ್ಗೆ ಹೆಚ್ಚಿನವರು ಆಸಕ್ತಿ ಕಡಿಮೆ. ಹೋಗುವವರನ್ನು ಇತರರು ನಿರಾಸಕ್ತಿಗೊಳ್ಳುವಂತೆ ಮಾತನ್ನಾಡುತ್ತಾರೆ. ಆದರೆ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮೊದಲು ಶಾಂತಿ, ಸಮಚಿತ್ತದಿಂದ ಇದ್ದಾಗ ರೋಗಿಗಳಿಗೆ ಸೂಕ್ತವಾಗಿ ಸ್ಪಂದಿಸಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಭೂ ದಾಖಲೆ ಇಲಾಖೆಯ ಜಂಟಿ ನಿರ್ದೇಶಕರಾದ ಸಿ.ಎಸ್.ರಮೇಶ್ ಮಾತನಾಡಿ, ಜೀವನದಲ್ಲಿ ನಾವು ಒಮ್ಮೆ ಬಿದ್ದಾಗ ಎಲ್ಲರಿಗೂ ಕಾಣುವಂತೆ ಮೇಲೇಳಬೇಕು. ಹಾಗೆಯೇ ಆಧ್ಯಾತ್ಮ ಶಿಬಿರಗಳಲ್ಲಿ ‘ಬಿ ಪಾಸಿಟಿವ್ ಎನ್ನುತ್ತಾರೆ. ಮೂರು ವರ್ಷಗಳ ಹಿಂದೆ ಈ ಹೆಸರು ಕೇಳಿದರೆ ಬೆಚ್ಚುತ್ತಿದ್ದರು. ಈಗ ನಮ್ಮ ದೇಶದಲ್ಲಿ ಆ ಪರಿಸ್ಥಿತಿ ಇಲ್ಲ. ಹಾಗಾಗಿ ಎಲ್ಲರೂ ‘ಬಿ ಪಾಸಿಟಿವ್ ಎಂದರೆ, ಎಲ್ಲದ್ದಕ್ಕೂ ನಕಾರಾತ್ಮಕವಾಗಿ ಚಿಂತಿಸಬೇಡಿ. ಇದರಿಂದ ಶಾಂತಿ, ನೆಮ್ಮದಿಯಿಂದ ಇರಲು ಸಾಧ್ಯ ಎಂದರು.
ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಪ್ರಜಾಪಿತ ಬ್ರಹ್ಮಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಮಂಡ್ಯ ಘಟಕದ ಸಂಚಾಲಕಿ ರಾಜಯೋಗಿನಿ ಬಿ.ಕೆ. ಶಾರದಾಜಿ ಅವರು ರಾಜಯೋಗ ಧ್ಯಾನ ಕುರಿತು ಮಾತನಾಡಿದರು. ಮೈಸೂರು ಪ್ರಾಂತ್ಯದ ಮುಖ್ಯಸ್ಥರಾದ ರಾಜಯೋಗಿನಿ ಬಿ.ಕೆ. ಲಕ್ಷ್ಮೀಜಿ ಅಧ್ಯಕ್ಷತೆ ವಹಿಸಿದ್ದರು.