ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಅವಕಾಶ

mysore
Published on

ಮೈಸೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಸೃಷ್ಟಿಸಿಕೊಳ್ಳುವ ಅವಕಾಶ ಇದೆ ಎಂದು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಮಣ್ಣ ಹೇಳಿದರು.

ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವತಿಯಿಂದ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಹಾಗೂ ಸಾಂಸ್ಕೃತಿಕ ವೇದಿಕೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಲು ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಯುವ ಜನರು ತಮಗೆ ಬೇಕಾದ ಉದ್ಯೋಗವನ್ನು ಆರಿಸಿಕೊಳ್ಳಬಹುದು. ಸರ್ಕಾರಿ ಉದ್ಯೋಗಕ್ಕೂ ಸಹ ವಿದ್ಯಾರ್ಥಿಗಳು ಪ್ರಯತ್ನ ಪಡಬೇಕು. ಐಎಎಸ್, ಕೆಎಎಸ್‌ನಂತಹ ಹುದ್ದೆ ಪಡೆದುಕೊಳ್ಳಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ಅಧ್ಯಯನ ಮತ್ತು ಪರಿಶ್ರಮ ಇದ್ದರೆ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು. ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಲು ಮತ್ತು ಪರಿಪೂರ್ಣತೆಯನ್ನು ಹೊಂದಲು ಮೊದಲು ಅಹಂ ಭಾವವನ್ನು ಬಿಡಬೇಕು. ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕು. ನೀವು ಮಾಡುವ ಕೆಲಸದ ಸ್ಪಷ್ಟ ಉದ್ದೇಶದ ಅರಿವು ನಿಮಗಿರಬೇಕು ಎಂದು ಹೇಳಿದರು.

ನಟ ಚೇತನ್ ಚಂದ್ರ ಮಾತನಾಡಿ, ಸಿನಿಮಾ ಕ್ಷೇತ್ರದಲ್ಲಿ ಕಲಿಯುವುದು ಬಹಳಷ್ಟು ಇದೆ. ಜತೆಗೆ ಪ್ರತಿಯೊಂದು ಸಿನಿಮಾವೂ ಸಹ ಹೊಸತವನ್ನು ಕಲಿಸುತ್ತದೆ. ಕೇವಲ ಒಬ್ಬರಿಂದ ಸಿನಿಮಾ ಮೂಡಿಬರಲ್ಲ ಎಂದರು.

ಜೀವನದಲ್ಲಿ ತಾಳ್ಮೆ ಮುಖ್ಯ. ಇದನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಸುವರ್ಣ ಯುಗ ಎಂದು ಹೇಳುತ್ತಾರೆ. ಅದನ್ನು ವಿದ್ಯಾರ್ಥಿಗಳು ಹಾಳುಮಾಡಿಕೊಳ್ಳಬೇಡಿ ಎಂದು ಎಂದು ಹೇಳಿದರು.

ಐಕ್ಯುಎಸಿ ಸಂಚಾಲಕ ಡಾ.ಎಸ್.ಮುತ್ತುರಾಜ, ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಎಚ್.ಎಸ್.ಧನಲಕ್ಷ್ಮೀ, ಖಜಾಂಚಿ ಪ್ರೊ.ಎನ್.ವನಿತಾ, ಕಚೇರಿ ಅಧಿಕ್ಷಕ ಎಂ.ಎನ್.ಪ್ರಭು, ವಿದ್ಯಾರ್ಥಿ ಸಮೂಹದ ಅಧ್ಯಕ್ಷೆ ಎನ್.ಲಿಖಿತಾ, ಕಾರ್ಯದರ್ಶಿ ಸಿಂಧುರಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net