ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಅತ್ಯವಶ್ಯಕ: ಎಸ್.ಯೋಗೇಶ್ ಅಭಿಮತ

ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಅತ್ಯವಶ್ಯಕ: ಎಸ್.ಯೋಗೇಶ್ ಅಭಿಮತ
Published on

ಹಾಸನ: ಯುವಕರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾತೃ ಭಾಷೆಯೊಂದಿಗೆ ಇಂಗ್ಲಿಷ್ ಭಾಷೆಯನ್ನೂ ಕಲಿಯುವುದು ಅತ್ಯವಶ್ಯಕವಾಗಿದೆ ಎಂದು ಎಂ.ಜಿ. ರಸ್ತೆಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಎಸ್. ಯೋಗೇಶ್ ಹೇಳಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ (ಗಂಧದ ಕೋಠಿ) ಕಾಲೇಜಿನ ಆಂಗ್ಲ ಭಾಷ ವಿಭಾಗದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಇಂಗ್ಲಿಷ್ ಭಾಷೆಯ ಮಹತ್ವ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂಗ್ಲಿಷ್ ಭಾಷೆ ಅಂತಾರಾಷ್ಟ್ರೀಯ ಭಾಷೆಯಾಗಿದ್ದು, ಬಹುತೇಕ ರಾಷ್ಟ್ರಗಳಲ್ಲಿ ಈ ಭಾಷೆಯನ್ನು ಬಳಕೆ ಮಾಡಲಾಗುತ್ತಿದೆ. ಆಂಗ್ಲ ಭಾಷೆ ಕಲಿಯುವುದರಿಂದ ಇಂದು ಯಾವುದೇ ಖಾಸಗಿ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದಾಗಿದೆ. ಉನ್ನತ ಶಿಕ್ಷಣ ಪಡೆದುಕೊಂಡವರು ಅವರ ಕೆಲಸಗಳಲ್ಲಿ ಸಮರ್ಥವಾಗಿ ತೊಡಗಿಸಿಕೊಳ್ಳಬೇಕಾದರೆ ಆಂಗ್ಲ ಭಾಷೆಯ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.
ಇಂಗ್ಲಿಷ್ ಕಲಿಯುವುದು ಆರಂಭದಲ್ಲಿ ಕಷ್ಟವಾಗಬಹುದು. ನಾವು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ನಮಗೆ ಸರಿಹೊಂದುವ ವ್ಯಕ್ತಿಗಳ ಸ್ನೇಹ ಮಾಡಿಕೊಳ್ಳುವುದರಿಂದ ಪರಸ್ಪರ ಕಲಿಕೆಗೆ ಸಹಾಯ ಮಾಡುವವರೊಂದಿಗೆ ಸೇರಿದರೆ ಇಂಗ್ಲಿಷ್ ಭಾಷೆಯನ್ನು ಸುಲಭವಾಗಿ ಕಲಿಯಬಹುದಾಗಿದೆ. ಇಂದಿಗೂ ಅನೇಕ ಯುವಕ-ಯುವತಿಯರು ಇಂಗ್ಲಿಷ್ ಭಾಷೆ ಕ್ಲಿಷ್ಟಕರ ಎಂದು ಭಾವಿಸಿದ್ದಾರೆ. ಈ ಮನಸ್ಥಿತಿಯಿಂದ ಯುವಕರು ಹೊರಬರಬೇಕು. ಶಾಲಾ ಹಂತದಿಂದಲೂ ಈ ಭಾಷೆಯನ್ನು ಕಲಿಯುವುದರಿಂದ ಭವಿಷ್ಯದಲ್ಲಿ ಉತ್ತಮ ಸ್ಥಾನ ಮಾನ ಪಡೆದುಕೊಳ್ಳಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ಯಾವ ಭಾಷೆಯನ್ನೂ ಸಹ ಕ್ಲಿಷ್ಟವೆಂದು ಭಾವಿಸದೇ ಸರಳವೆಂದು ಭಾವಿಸಿ ಕಲಿಯಲು ಮುಂದಾದರೆ ಎಲ್ಲಾ ಭಾಷೆಯೂ ಸಹ ಸರಳವೆಂಬ ಭಾವನೆ ಮೂಡುತ್ತದೆ. ಇಂಗ್ಲಿಷ್ ಎಂಬುವುದು ಕಬ್ಬಿಣದ ಕಡಲೆಯಂತೆ ಭಾವಿಸದೇ ಸುಲಭ ಎಂದು ಪರಿಗಣಿಸಿಬೇಕು. ಮುಕ್ತವಾಗಿ ಮಾತನಾಡಲು ಮುಂದಾದಾಗ ಕಲಿಯಬೇಕಾದ ವಿಷಯವೂ ತಾನಾಗಿಯೇ ಹರಸಿ ಬರುತ್ತದೆ. ಕಷ್ಟುಪಟ್ಟು ಕಲಿಯುವುದನ್ನು ಬಿಟ್ಟು ಇಷ್ಟಪಟ್ಟು ಕಲಿಯಬೇಕು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಚಾರ ಮಾಡುವ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಯ ಪ್ರಾಮುಖ್ಯತೆ ಎಷ್ಟು ಎಂದು ತಿಳಿಯುತ್ತದೆ. ಹಾಗಾಗಿ ಯುವಕ ಯುವತಿಯರು ಇತರರೊಂದಿಗೆ ವ್ಯವಹರಿಸುವಷ್ಟು ಇಂಗ್ಲಿಷ್ ಭಾಷೆಯನ್ನು ಕಲಿಯಬೇಕು ಎಂದರು.
ಆಂಗ್ಲ ವಿಭಾಗದ ಮುಖ್ಯಸ್ಥ ಜಿ.ಆರ್. ಮೋಹನ್, ಐಕ್ಯೂಎಸಿ ಸಂಚಾಲಕಿ ಡಿ.ಜೆ. ರಮ್ಯಾ, ಉಪನ್ಯಾಸಕರಾದ ಡಿ. ರಶ್ಮಿ, ರೂಪಶ್ರೀ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net