ಸ್ಪಂದನಾ ಫೌಂಡೇಷನ್‌ನಿಂದ ಸೈಕಲ್ ಜಾಥಾ

22
Published on

ಮೈಸೂರು: ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಕುವೆಂಪುನಗರದ ಸ್ಪಂದನಾ ಫೌಂಡೇಷನ್ ವತಿಯಿಂದ ಶನಿವಾರ ಸೈಕಲ್ ಜಾಥಾ ಆಯೋಜಿಸಲಾಗಿತ್ತು.
ನಗರದ ವಿವಿಧ ರಸ್ತೆಗಳಲ್ಲಿ ಸಾಗಿದ ಸೈಕಲ್ ಜಾಗೃತಿ ಜಾಥಾದಲ್ಲಿ 20ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು ಭಾಗವಹಿಸಿದ್ದರು. ಅನಿಕೇತನ ರಸ್ತೆಯ ಜೋಡಿ ಬಸವೇಶ್ವರ ದೇವಸ್ಥಾನದ ಬಳಿಯಿಂದ ಬೆಳಗ್ಗೆ ಆರಂಭಗೊಂಡ ಜಾಥಾ, ಗಗನಚುಂಬಿ ಜೋಡಿ ರಸ್ತೆ, ಉದಯರವಿ ರಸ್ತೆ ಮೂಲಕ ಶ್ರೀರಾಮಕೃಷ್ಣ ಪರಮಹಂಸ ವೃತ್ತದ ಮಾರ್ಗವಾಗಿ ಹೊರವರ್ತುಲ ರಸ್ತೆ ತಲುಪಿ, ಆದಿತ್ಯ ವೃತ್ತದವರೆಗೂ ಸಾಗಿತು. ಆದಿತ್ಯ ವೃತ್ತದಿಂದ ರಾಮಕೃಷ್ಣ ಪರಮಹಂಸ ವೃತ್ತದ ಮಾರ್ಗವಾಗಿ ಹಿಂದಿರುಗಿದ ಜಾಥಾ, ವಿಶ್ವ ಮಾನವ ಜೋಡಿ ರಸ್ತೆಯ ಮೂಲಕ ಅನಿಕೇತನ ರಸ್ತೆಯಲ್ಲಿ ಸಾಗಿ ಚಿಕ್ಕಮ್ಮಾನಿಕೇತನ ಬಳಿ ಕೊನೆಗೊಂಡಿತು.
ಜಾಥಾದಲ್ಲಿ ಭಾಗವಹಿಸಿದ್ದ 13 ವರ್ಷದ ನಿಹಾರಿಕಾ 8 ಕಿ.ಮೀ. ಸೈಕಲ್ ತುಳಿಯುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರೆ, 71ರ ಹರೆಯದಲ್ಲೂ ಸೈಕ್ಲಿಂಗ್‌ನಲ್ಲಿ ಭಾಗವಹಿಸಿದ್ದ ಕಿರಣ್, ಡಾ.ಚಂದ್ರಚೂಡ್ ಎಲ್ಲರಲ್ಲೂ ಉತ್ಸಾಹ ತುಂಬಿದರು. ಜಾಥಾ ನಂತರ ಎಲ್ಲರಿಗೂ ಪ್ರಶಂಸನಾ ಪತ್ರ ಮತ್ತು ಮೆಡಲ್ ನೀಡಿ ಗೌರವಿಸಲಾಯಿತು.
ಫೌಂಡೇಷನ್ ಅಧ್ಯಕ್ಷ ಜಯಶಂಕರ್, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಆಯೋಜಕರಾದ ಡಾ.ಪ್ರಭುಲಿಂಗಸ್ವಾಮಿ, ಡಾ.ಕುಮಾರಸ್ವಾಮಿ, ಡಾ.ಕೃಷ್ಣಮೂರ್ತಿ, ನಾಗರಾಜ್, ನಿವೃತ್ತ ಪ್ರಾಧ್ಯಾಪಕರಾದ ಸೋಮೇಶ್, ರತ್ನಶೇಖರ್, ಶ್ರೀಧರ್ ಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net