ಕೆ.ಆರ್.ಸಾಗರ: ಕುಡಿತ ಮತ್ತಿನಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿ 11 ತಿಂಗಳ ಕಾಲ ನಾಪತ್ತೆಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಆರ್‌ಎಸ್‌ನ ಮದ್ದೂರು ಪೈಲ್ ನಿವಾಸಿ, ಆಟೋ ಚಾಲಕ ಆನಂದ್(24), ಕೆಂಚ ಅಲಿಯಾಸ್ ಕಿರಣ(24) ಹಾಗೂ ಹೊಂಗಹಳ್ಳಿ ಗ್ರಾಮದ ಪುಟ್ಟ ಅಲಿಯಾಸ್ ನಿಖಿಲ್(24) ಬಂಧಿತರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಜ್ವಲ್ 2022ರ ಏಪ್ರಿಲ್ 4 ರಂದು ಕಾಣೆಯಾಗಿರುವ ಬಗ್ಗೆ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪಾಲಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.
ಈ ಮಧ್ಯೆ ಕೆ.ಆರ್.ಸಾಗರ - ಹೊಂಗಳ್ಳಿ ಗ್ರಾಮದ ಮಜ್ಜಿಗೆಪುರ ರಸ್ತೆಯ ಬಳಿ ಇರುವ ಪೂರ್ಣಯ್ಯ ನಾಲೆಯ ಮರವೊಂದರಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ದೂರು ನೀಡಿದ್ದ ಪ್ರಜ್ವಲ್ ಪಾಲಕರನ್ನು ಮೃತದೇಹ ಪತ್ತೆಹಚ್ಚಲು ಕರೆಸಲಾಗಿತ್ತು. ಆದರೆ ಪ್ರಜ್ವಲ್ ಮೃತದೇಹ ಅಲ್ಲ ಎಂದು ಹೇಳಿ ಮೃತನ ಚಿಕ್ಕಪ್ಪ ಹಾಗೂ ತಾಪಂ ಮಾಜಿ ಸದಸ್ಯ ಜಯರಾಮು ಹಿಂದಿರುಗಿದ್ದರು. ಮದ್ದೂರು ಪೈಲ್ ನಿವಾಸಿ ಆನಂದ ಎಂಬಾತ ಪ್ರಜ್ವಲ್ ಸ್ನೇಹಿತನಾಗಿದ್ದು, ಈತನ ಜತೆಯಲ್ಲೇ ಹೆಚ್ಚು ಇರುತ್ತಿದ್ದ ಹಿನ್ನೆಲೆಯಲ್ಲಿ ನಾಪತ್ತೆಯಾಗಿ ನಂತರ ಗ್ರಾಮಕ್ಕೆ ಬಂದಿರುವ ವಿಚಾರ ತಿಳಿದ ಪೊಲೀಸರು ಆನಂದನನ್ನು ಮಂಗಳವಾರ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
2022ರ ಏಪ್ರಿಲ್ 4 ರಂದು ಸ್ನೇಹಿತರಾದ ಕೆಂಚ, ಪುಟ್ಟನ ಜತೆ ಸೇರಿಕೊಂಡು ಬಾರ್‌ವೊಂದರಲ್ಲಿ ಮದ್ಯ ಸೇವಿಸಿ ನಂತರ ಸಮೀಪದ ಗ್ರಾಮದಲ್ಲಿ ಆರ್ಕೆಸ್ಟ್ರಾ ನೋಡಿಕೊಂಡು ಮತ್ತೆ ಮೈಸೂರಿನಲ್ಲಿ ಮದ್ಯ ಸೇವಿಸಿದ್ದೆವು. ಈ ವೇಳೆ ಪ್ರಜ್ವಲ್ ಸ್ನೇಹಿತರನ್ನು ನಿಂದಿಸಿದ್ದ. ಈ ವೇಳೆ ಉಳಿದ ಸ್ನೇಹಿತರು ಪ್ರಜ್ವಲ್ ಮೇಲೆ ಹಲ್ಲೆ ಕೊಲೆ ಮಾಡಿ ಆಟೋದಲ್ಲಿ ತೆಗೆದುಕೊಂಡು ಹೋಗಿ ಮರಕ್ಕೆ ನೇಣು ಹಾಕಿದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಬಂಧಿತ ಆನಂದ ನೀಡಿದ ಮಾಹಿತಿ ಮೇರೆಗೆ ಕೆಂಚ ಹಾಗೂ ಪುಟ್ಟನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತರ ಪತ್ತೆ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಅಡಿಷನಲ್ ಎಸ್ಪಿ ತಿಮ್ಮಯ್ಯ ಡಿವೈಎಸ್‌ಪಿ ಎಚ್.ಎಸ್.ಮುರಳಿ ಮಾರ್ಗದರ್ಶನದಲ್ಲಿ ಕೆ.ಆರ್.ಸಾಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಪುನೀತ್, ಪಿಎಸ್‌ಐ ಸಿ.ಎಂ.ಲಿಂಗರಾಜು, ಸಿಬ್ಬಂದಿ ನಟರಾಜು, ಸತೀಶ್, ಶ್ರೀಧರ್, ಮಂಜುನಾಥ್, ರವೀಶ್, ರವಿ ಭಾಗಿಯಾಗಿದ್ದರು.