

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸರಗೂರು ಸ್ನಾನಘಟ್ಟ ಒತ್ತುವರಿ ತೆರವು ಪ್ರಕರಣದಲ್ಲಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಭರವಸೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ದಲಿತ ಮುಖಂಡರೊಂದಿಗಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸರಗೂರು ಸ್ನಾನಘಟ್ಟ ಒತ್ತುವರಿ ತೆರವು ಪ್ರಕರಣದ ಕುರಿತು ಈಗಾಗಲೇ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಮಾಡಿದ್ದೇನೆ. ಸರ್ವೇ ಇಲಾಖೆ ವರದಿ ಬರುವುದು ಬಾಕಿಇದ್ದು, ಇನ್ನುಳಿದ ವರದಿಗಳು ಬಂದಿವೆ. ಶೀಘ್ರದಲ್ಲೇ ಎಲ್ಲಾ ವರದಿಗಳನ್ನು ದಾಖಲೆ ಸಮೇತ ಪರಿಶೀಲಿಸಿ, ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ದಲಿತ ಮುಖಂಡರು ಇನ್ನು ಯಾವುದಾದರು
ದಾಖಲೆ, ಹೇಳಿಕೆ ಹಾಗೂ ಲಿಖಿತ ಮಾಹಿತಿ ನೀಡುವುದಿದ್ದರೆ ಅದೆಲ್ಲವನ್ನು ಮಾ.3 ರಂದು ನೀಡಬಹುದು ಎಂದು ತಿಳಿಸಿದರು. ಇದೇ ವೇಳೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರೊಂದಿಗೆ ಪ್ರಕರಣದ ಕುರಿತು ಸಮಾಲೋಚಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಮುಳ್ಳೂರು ಶಿವಮಲ್ಲು ಮಾತನಾಡಿ, ಸರಗೂರು ಗ್ರಾಮದ ಕಾವೇರಿ ನದಿಪಾತ್ರದಲ್ಲಿರುವ ಸರ್ವೆ.ನಂ.215/ಬಿ ಗೆ ಸೇರಿದ ಗ್ರಾಮದ ಸ್ನಾನಘಟ್ಟ (ಗೋಮಾಳ) ರಕ್ಷಣೆಗೆ ಜಾತಿ ಬೇದ ಮರೆತು ಗ್ರಾಮಸ್ಥರು ಮುಂದಾಗಿದ್ದೇವೆ. ಈ ಕೆಲಸವನ್ನು ನಿಜಕ್ಕೂ ತಾಲೂಕು ಆಡಳಿತ ಮಾಡಬೇಕಿತ್ತು. ಆದರೆ, ಸ್ನಾನಘಟ್ಟ ಒತ್ತುವರಿದಾರನ ಪರವಾಗಿ ಅಧಿಕಾರಿಗಳು ನಿಂತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಸಂಬಂಧಿಸಿದಂತೆ ಫೆ.11 ರಂದು ಕೊಳ್ಳೇಗಾಲ ಪಟ್ಟಣದಲ್ಲಿ ದಲಿತ ಪರ ಸಂಘಟನೆಗಳು ಹಾಗೂ ಮುಖಂಡರು ಸೇರಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಗಿತ್ತು. ಶೀಘ್ರವೇ ತನಿಖೆ ನಡೆಸಿ, ಪ್ರಕರಣದ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರಗೂರು ಗ್ರಾಮದ ಮುಖಂಡ ಶಿವಶಂಕರ್, ಪಾಳ್ಯ ಪರಮೇಶ್, ಪರಶಿವ ಮಾತನಾಡಿ, ಇಂದಿಗೂ ಸ್ನಾನಘಟ್ಟ ಒತ್ತುವರಿದಾರ ಅವರ ತೋಟದಲ್ಲಿ ಅಕ್ರಮವಾಗಿ ವಿದ್ಯುತ್ ಸಂರ್ಪಕ ಹೊಂದಿದ್ದು, ಕಾವೇರಿ ನದಿಯಿಂದ ನೀರೆತ್ತುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಸೆಸ್ಕ್ ಅಧಿಕಾರಿ ಸೇರಿದಂತೆ ವಿವಿದ ಇಲಾಖೆಗಳಿಂದ ಈ ಸಂಬಂಧ ತನಿಖಾ ವರದಿ ಬಂದ ನಂತರ ಕ್ರಮವಹಿಸುತ್ತೇವೆ ಎಂದರು.
ಈ ವೇಳೆ ದಲಿತ ಮುಖಂಡ ಎಸ್.ರಾಜಶೇಖರಮೂರ್ತಿ, ಚಿಕ್ಕಮಾಳಿಗೆ, ಧನಗೆರೆ ಮಹದೇವ, ಲಕ್ಷ್ಮಣ, ಸರಗೂರಿನ ನಾಡಗೌಡ್ರು ದೊರೆಸ್ವಾಮಿ, ಮುಖಂಡರಾದ ಮಲ್ಲು, ಮಲ್ಲ, ರಂಗಸ್ವಾಮಿ, ಜೋಷಿ ಹಾಗೂ ಇತರರು ಹಾಜರಿದ್ದರು.