

ಕೊಳ್ಳೇಗಾಲ: ತಾಲೂಕಿನ ಸರಗೂರು ನದಿ ತೀರದಲ್ಲಿರುವ ಸ್ನಾನಘಟ್ಟವನ್ನು ಅತಿಕ್ರಮ ಮಾಡಲಾಗಿದೆ. ತಾಲೂಕು ಆಡಳಿತ ತೆರವು ಮಾಡಿಸಲು ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ಆ.10ರಂದು ಪ್ರತಿಭಟನೆ ನಡೆಸುಲು ನಿರ್ಧರಿಸಿದ್ದೇವೆ ಎಂದು ಗ್ರಾಮದ ಮುಖಂಡ ಶಿವಶಂಕರ್ ಹೇಳಿದರು.
ಗ್ರಾಮದ ಸರ್ವೇ 215/20 ರಲ್ಲಿ 3 ಎಕರೆ ಜಮೀನು ಸ್ನಾನ ಘಟವಾಗಿತ್ತು. ಈ ಸ್ಥಳದಲ್ಲಿ ಹಿಂದಿನಿಂದಲೂ ಶಿವನಸಮುದ್ರ ಮಾರಮ್ಮನ ಮಡೆ ಆಚರಿಸಲಾಗುತ್ತಿತ್ತು. ಸ್ನಾನಘಟ್ಟವನ್ನು ಪ್ರಭಾವಿ ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೆವು. ನ್ಯಾಯಾಲಯ ವಿಚಾರಣೆ ನಡೆಸಿ ಸ್ನಾನಘಟ್ಟದ ಸ್ಥಳದ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿತ್ತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದೀಗ 3 ಎಕರೆ ಪೈಕಿ 2 ಎಕರೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಹಾಗೂ ಗುಂಡಾಲ್ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಗೆ ಯಂತ್ರಾಗಾರವನ್ನು ಸರ್ಕಾರ ನಿರ್ಮಿಸಿದೆ. ಉಳಿದ 1 ಎಕರೆಯನ್ನು ಅತಿಕ್ರಮಿಸಿಕೊಂಡಿದ್ದು, ರಾತ್ರಿ ವೇಳೆ ಮರಳು ದಂಧೆ ನಡೆಸಲಾಗುತ್ತಿದೆ. ಈ ಕುರಿತು ತಹಸೀಲ್ದಾರ್‌ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಪ್ರತಿಭಟನೆಗೆ ನಿರ್ಧರಿಸಿದ್ದೇವೆ ಎಂದರು.
ಮುಖಂಡರಾದ ಶಿವಕುಮಾರ್, ಮಲ್ಲು , ಮಾದೇವು, ಗ್ರಾಪಂ ಸದಸ್ಯ ಸುನೀಲ್ ಕುಮಾರ್ ಇದ್ದರು.