

ಚಿಕ್ಕಬಳ್ಳಾಪುರ: ಸ್ವಪಕ್ಷೀಯರ ಮುನಿಸು, ಸ್ಥಾನಗಳ ಹಂಚಿಕೆಯಲ್ಲಿನ ಅಸಮಾಧಾನ ಸೇರಿ ನಾನಾ ಕಾರಣಗಳಿಂದ ಸದಸ್ಯರು ದೂರ ಉಳಿದ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಾಗಿದ್ದ ಜಿಪಂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯ ಚುನಾವಣೆ ಸ್ಥಗಿತಗೊಂಡಿತು.
ಜಿಪಂ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಿಗದಿಯಾಗಿತ್ತು, ಆದರೆ, ಕೋರಂಗೆ ಅಗತ್ಯವಿರುವ 21 ಸದಸ್ಯರ ಬದಲಿಗೆ 17 ಮಂದಿ ಮಾತ್ರ ಇದ್ದರು. ಕೊನೆಗೆ ಕೋರಂ ಕೊರತೆ ಕಾರಣದಿಂದ ಚುನಾವಣಾ ಪ್ರಕ್ರಿಯೆ ಮುಂದೂಡಲಾಗಿದೆ ಎಂದು ಜಿಪಂ ಸಿಇಒ ಬಿ ಫೌಜೀಯಾ ತರನ್ನುಮ್ ಘೋಷಿಸಿದರು.
28 ಸದಸ್ಯರ ಬಲದ ಜಿಪಂನಲ್ಲಿ ಕಾಂಗ್ರೆಸ್ 21 ಸ್ಥಾನಗಳ ಮೂಲಕ ಸ್ಪಷ್ಟ ಬಹುಮತ ಹೊಂದಿದೆ. ಆದರೆ, ಸ್ವಪಕ್ಷೀಯರ ಬಂಡಾಯ, ಬಣಗಳ ಸೃಷ್ಟಿ ಮತ್ತು ಪರಸ್ಪರ ಭಿನ್ನಮತದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಯ ಲೆಕ್ಕಾಚಾರಗಳು ತಲೆ ಕೆಳಗಾಗುತ್ತಿದ್ದು ಪಕ್ಷಕ್ಕಿಂತಲೂ ವೈಯಕ್ತಿಕ ಬಲಾಬಲದಲ್ಲಿಯೇ ಬಣಗಳು ಮೇಲುಗೈ ಸಾಧಿಸುತ್ತಿದ್ದು, ಇದು ಈಗ ಸ್ಥಾಯಿ ಸಮಿತಿ ಚುನಾವಣೆಯಲ್ಲೂ ಮುಂದುವರಿದಿದೆ.
ಜಿಪಂ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಮಂಚೇನಹಳ್ಳಿ ಕ್ಷೇತ್ರದ ಪಿ.ಎನ್.ಪ್ರಕಾಶ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಿತ್ತು. ಅದರಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದರು. ಆದರೆ, ಇದಕ್ಕೆ ಸೆಡ್ಡು ಹೊಡೆದ ಎಂ.ಬಿ.ಚಿಕ್ಕನರಸಿಂಹಯ್ಯ ಜೆಡಿಎಸ್ ಮತ್ತು ಇತರ ಪಕ್ಷದ ಸದಸ್ಯರ ಬೆಂಬಲ ಪಡೆದುಕೊಂಡು ಅಧ್ಯಕ್ಷರಾಗಿ ಆಯ್ಕೆಯಾದರು. ಇದು ಕಾಂಗ್ರೆಸ್ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು.
ಸ್ಥಾಯಿ ಸಮಿತಿ ಹಂಚಿಕೆ ಸಮಸ್ಯೆ : ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಗೆ ಜಿಪಂ ಅಧ್ಯಕ್ಷರು, ಸಾಮಾನ್ಯ ಸ್ಥಾಯಿ ಸಮಿತಿಗೆ ಜಿಪಂ ಉಪಾಧ್ಯಕ್ಷರು ಪಂಚಾಯತ್ ರಾಜ್ ನಿಯಮದಲ್ಲಿ ಅಧ್ಯಕ್ಷರಾಗಿರುತ್ತಾರೆ. ಉಳಿದ ಮೂರು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ಚರ್ಚೆಯಾಗಿ ಒಮ್ಮತ ಮೂಡಿರಲಿಲ್ಲ. ಇತ್ತ ಜಿಪಂ ಅಧ್ಯಕ್ಷರ ಚುನಾವಣೆಯಲ್ಲಿ ಮತ ನೀಡಿ ಬೆಂಬಲಿಸಿದ ಅನ್ಯ ಪಕ್ಷದ ಸದಸ್ಯರು ಸ್ಥಾಯಿಸಮಿತಿ ಅಧ್ಯಕ್ಷ ಗಾದಿಗೆ ಒತ್ತಡ ಹೇರುತ್ತಿದ್ದಾರೆ. ಇತ್ತ ಪ್ರತಿಪಕ್ಷದ ಸದಸ್ಯರಿಗೆ ಅಧಿಕಾರ ಬಿಟ್ಟು ಕೊಡಲು ಸ್ವಪಕ್ಷೀಯರು ಒಪ್ಪುತ್ತಿಲ್ಲ. ಇದರ ನಡುವೆ ಚುನಾವಣೆ ಘೋಷಣೆಯಾಗಿದ್ದು ಇದರಿಂದ ಸದಸ್ಯರು ದೂರ ಉಳಿದಿದ್ದಾರೆ.
ಕೋರಂ ಕೊರತೆ : ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು ಸೇರಿ ಕಾಂಗ್ರೆಸ್‌ನ 21 ಸದಸ್ಯರು ಆಗಮಿಸಿದ್ದರು. ಆದರೆ, ಪ್ರಕ್ರಿಯೆಯಲ್ಲಿ 5 ಮಂದಿ ದೂರ ಉಳಿದರು. ಅಂತಿಮ ತೀರ್ಮಾನ ಕೈಗೊಳ್ಳದ ಹಿನ್ನೆಲೆಯಲ್ಲಿ ಬಹಿಷ್ಕರಿಸುತ್ತಿರುವುದಾಗಿ ತಿಳಿಸಿ ಹೊರ ನಡೆದರು. ಜಿಪಂ ಸಭಾಂಗಣದಲ್ಲಿ ಮಾರ್ಚ್ 5 ಇಲ್ಲವೇ 7 ರಂದು ಕುಡಿಯುವ ನೀರಿನ ಸಮಸ್ಯೆ ಕುರಿತ ಚರ್ಚಿಸಲು ಸಭೆ ಕರೆದಿದ್ದು ಇದೇ ವೇಳೆ ಸ್ಥಾಯಿ ಸಮಿತಿ ರಚನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಿಪಂ ಸ್ಥಾಯಿ ಸಮಿತಿಗಳ ಚುನಾವಣೆ ಕೋರಂ ಕೊರತೆಯಿಂದ ಸ್ಥಗಿತಗೊಂಡಿದ್ದು ನಿಯಮಾನುಸಾರ ದಿನಾಂಕ ನಿಗದಿಪಡಿಸಲಾಗುತ್ತದೆ. ನೋಮೇಶ್ ಕುಮಾರ್, ಜಿಪಂ ಉಪಕಾರ್ಯದರ್ಶಿ, ಚಿಕ್ಕಬಳ್ಳಾಪುರ