ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ

Election 3
Published on

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಅಭಿವೃದ್ಧಿ ಕೆಲಸಗಳಿಗಿಂತ ಪಕ್ಷ, ವೈಯಕ್ತಿಕ ರಾಜಕಾರಣ ಹೆಚ್ಚುತ್ತಿರುವ ಬೆನ್ನಲ್ಲೆ ಪಾಲಿಕೆ ಸ್ಥಾಯಿ ಸಮಿತಿಗಳಿಗೆ ನೂತನ ಅಧ್ಯಕ್ಷ, ಸದಸ್ಯರ ಆಯ್ಕೆ ಚುನಾವಣೆ ದಿಢೀರ್ ಮುಂದೂಡಿದ್ದು ಮತ್ತಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷ, ಸದಸ್ಯರ ಆಯ್ಕೆ ಚುನಾವಣೆ ಜುಲೈ 2ರಂದು ಘೋಷಣೆಯಾಗಿತ್ತು. ಆದರೆ ಪ್ರಾದೇಶಿಕ ಆಯುಕ್ತರು ಚುನಾವಣೆ ರದ್ದುಪಡಿಸಿ ಆದೇಶಿಸಿದರು. ಅಧಿಕಾರ ಅವಧಿ ಮುಗಿದು ವಾರ ಕಳೆದರೂ ಚುನಾವಣೆ ನಡೆಸದಿರುವುದಕ್ಕೆ ಸರ್ಕಾರದ ವಿರುದ್ಧವೇ ಆಡಳಿತಾರೂಢ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಈಗಾಗಲೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಹರಾಜಿನಲ್ಲಿ ತಿನಿಸು ಕಟ್ಟೆಯಲ್ಲಿ ಮಳಿಗೆ ಪಡೆದಿರುವ ಆರೋಪದ ಮೇಲೆ ಪಾಲಿಕೆ ಮೇಯರ್ ಮಂಗೇಶ ಪವಾರ ಮತ್ತು ಸದಸ್ಯ ಜಯಂತ ಜಾಧವ ಅವರ ಸದಸ್ಯತ್ವ ರದ್ದುಪಡಿಸಿ ಪ್ರಾದೇಶಿಕ ಆಯುಕ್ತರು ಆದೇಶಿಸಿದರು. ಬಳಿಕ ಬಿಜೆಪಿಯವರು ಕೋರ್ಟ್‌ದಿಂದ ತಡೆಯಾಜ್ಞೆ ತಂದಿದ್ದರು.

ಇದೀಗ ಯಾವುದೇ ಕಾರಣವಿಲ್ಲದೆ ಸ್ಥಾಯಿ ಸಮಿತಿ ಚುನಾವಣೆಯನ್ನೂ ಮುಂದೂಡಿದ್ದಾರೆ. ಈ ಕುರಿತು ಪ್ರಾದೇಶಿಕ ಆಯುಕ್ತರು ಮೇಯರ್, ಉಪಮೇಯರ್‌ಗೆ ಸ್ಪಷ್ಟ ಮಾಹಿತಿ ನೀಡದಿರುವುದೇ ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ. ಪಾಲಿಕೆಯ 58 ವಾರ್ಡ್‌ಗಳ ಅಭಿವೃದ್ಧಿ ಕುರಿತು ಕ್ರಿಯಾಯೋಜನೆ ಅನುಮೋದನೆ, ಅನುದಾನ ಬಿಡುಗಡೆ, ಕಟ್ಟಡ, ವಾಣಿಜ್ಯ ಮಳಿಗೆಗಳಿಗೆ ಪರವಾನಗಿ, ರಸ್ತೆ, ಚರಂಡಿ ದುರಸ್ತಿ, ತೆರಿಗೆ ದರ ನಿಗದಿ, ಸಿಬ್ಬಂದಿ ನೇಮಕಾತಿ ಸೇರಿ ವಿವಿಧ ಅಧಿಕಾರವನ್ನು ಸ್ಥಾಯಿ ಸಮಿತಿ ಅಧ್ಯಕ್ಷರು ಹೊಂದಿರುತ್ತಾರೆ. ಅಲ್ಲದೆ, ಸಮಿತಿ ಅಧ್ಯಕ್ಷರ ಒಪ್ಪಿಗೆ ಇಲ್ಲದೆ ಮೇಯರ್, ಆಯುಕ್ತರು ಕೂಡ ನಿರ್ಣಯ ಕೈಗೊಳ್ಳಲು ಬರುವುದಿಲ್ಲ. ಹೀಗಾಗಿ ಕೂಡಲೇ ಚುನಾವಣೆ ನಡೆಸಬೇಕು ಎಂದು ಸದಸ್ಯರು ಆಗ್ರಹಿಸಿದ್ದಾರೆ.

ಈ ನಡುವೆ ಪಾಲಿಕೆ ಯೋಜನಾ ಸ್ಥಾಯಿ ಸಮಿತಿ, ಹಣಕಾಸು ಸ್ಥಾಯಿ ಸಮಿತಿ, ಆರೋಗ್ಯ ಸ್ಥಾಯಿ ಸಮಿತಿ ಹಾಗೂ ಲೋಕೋಪಯೋಗಿ ಸ್ಥಾಯಿ ಸಮಿತಿಗಳ ಅಧ್ಯಕ್ಷ ಹಾಗೂ ಸದಸ್ಯರ ಅಧಿಕಾರ ಅವಧಿ ಜೂ.30ಕ್ಕೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿನ ಆಡಳಿತಾರೂಢ ಬಿಜೆಪಿ ಸದಸ್ಯರು ಸಮಿತಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಸಜ್ಜಾಗಿದ್ದ ಆಕಾಂಕ್ಷಿಗಳಿಗೆ ಚುನಾವಣೆ ರದ್ದುಗೊಂಡಿದ್ದು ನಿರಾಸೆ ತಂದಿದೆ.

ಈಗಾಗಲೇ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ, ಸದಸ್ಯರ ಅಧಿಕಾರ ಅವಧಿ ಜೂನ್ 30ಕ್ಕೆ ಮುಗಿದಿದೆ. ಜು.2ರಂದು ಚುನಾವಣೆ ಘೋಷಣೆ ಆಗಿತ್ತು. ಆದರೆ, ಪ್ರಾದೇಶಿಕ ಆಯುಕ್ತರು ಯಾವ ಕಾರಣಕ್ಕೆ ಚುನಾವಣೆ ಮುಂದೂಡಿದ್ದಾರೆ ಗೊತ್ತಿಲ್ಲ. ಇದೀಗ ಮೇಯರ್ ಕಚೇರಿಯಿಂದ ಚುನಾವಣೆ ನಡೆಸುವಂತೆ ಪತ್ರ ಬಂದಿದ್ದು, ಪ್ರಾದೇಶಿಕ ಆಯುಕ್ತ ಕಚೇರಿಗೆ ಕಳುಹಿಸಿಕೊಡಲಾಗುವುದು. | ಶುಭ ಬಿ., ಪಾಲಿಕೆ ಆಯುಕ್ತೆ ಪ್ರಾದೇಶಿಕ ಆಯುಕ್ತರು ಯಾವ ಕಾರಣಕ್ಕೆ ಚುನಾವಣೆ ಮುಂದೂಡಿದ್ದಾರೆ ಎಂಬ ಕುರಿತು ಮಾಹಿತಿ ನೀಡಿಲ್ಲ. ಅಧಿಕಾರ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆಸುವ ಸಾಂಪ್ರದಾಯ ಮುರಿದಿದ್ದಾರೆ. ಕೂಡಲೇ ಚುನಾವಣೆ ನಡೆಸುವಂತೆ ಮೇಯರ್ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಲಿದ್ದೇವೆ. | ಹಣಮಂತ ಕೊಂಗಾಲಿ ಪಾಲಿಕೆ ಆಡಳಿತಾರೂಢ ಪಕ್ಷದ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net