ಸ್ಥಳೀಯರಿಗೇ ಟಿಕೆಟ್ ನೀಡಿ

20blrp2
Published on

ಬೇಲೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಂದಲೂ ಅರ್ಹ ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿ ಭಾರತೀಯ ಪರಿವರ್ತನ ಸಂಘದ ಸದಸ್ಯರು ಸೋಮವಾರ ಪಟ್ಟಣದ ಅಂಬೇಡ್ಕರ್ ಪತ್ಥಳಿ ಆವರಣದಿಂದ ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಭಾರತೀಯ ಪರಿವರ್ತನ ಸಂಘದ ಜಿಲ್ಲಾ ಸಂಚಾಲಕ ಎನ್.ಯೋಗೇಶ್ ಮಾತನಾಡಿ, ಸ್ಥಳೀಯವಾಗಿ ಎಲ್ಲರ ಕಷ್ಟಸುಖಗಳನ್ನು ಹಾಗೂ ಗ್ರಾಮೀಣ ಭಾಗದ ಜನರ ಸಮಸ್ಯೆ ಮತ್ತು ಮಲೆನಾಡು ಭಾಗದವರ ಸಮಸ್ಯೆಗಳನ್ನು ತಿಳಿದುಕೊಂಡು ಕೆಲಸ ಮಾಡುತ್ತಾರೆ. ಇಲ್ಲದಿದ್ದಲ್ಲಿ ಹೊರಗಿನಿಂದ ಬಂದವರು ಚುನಾವಣೆ ತನಕ ಇದ್ದು ಗೆದ್ದ ಅಥವಾ ಸೋತ ನಂತರ ಇತ್ತ ತಿರುಗಿಯೂ ನೋಡುವುದಿಲ್ಲ. ಹೀಗಾದರೆ ಕ್ಷೇತ್ರದ ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸುವವರು ಯಾರು ಎಂಬ ಪ್ರಶ್ನೆ ಕಾಡುತ್ತದೆ. ಅಲ್ಲದೆ, ಈ ಹಿಂದೆ ಮೀಸಲಾತಿ ಇದ್ದ ಸಂದರ್ಭದಲ್ಲೂ ಹೊರಗಿನವರೇ ಶಾಸಕರಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ನಂತರದಲ್ಲಿ ರುದ್ರೇಶ್‌ಗೌಡರು ಮತ್ತು ಕೆ.ಎಸ್. ಲಿಂಗೇಶ್ ಶಾಸಕರಾಗಿ ಕೆಲಸ ಮಾಡಿದ್ದಾರೆ. ಅವರಂತೆ ಈ ಚುನಾವಣೆಯಲ್ಲಿ ಎಲ್ಲ ಪಕ್ಷದಿಂದಲೂ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಸ್ಥಳೀಯ ಅಭ್ಯರ್ಥಿಗಳಾದರೆ ಯಾವುದೇ ಗೊಂದಲಕ್ಕೂ ಅವಕಾಶವಿಲ್ಲದಂತೆ ಅವರಿಂದ ಕೆಲಸ ಮಾಡಿಸಿಕೊಳ್ಳಬಹುದಾಗಿರುತ್ತದೆ ಎಂದರು.

ಭಾರತೀಯ ಪರಿವರ್ತನ ಸಂಘದ ತಾಲೂಕು ಉಪಾಧ್ಯಕ್ಷ ಹಾಗೂ ವಿಶ್ವಕರ್ಮ ಸಮಾಜದ ಮುಖಂಡ ತಗರೆ ವಿಶ್ವನಾಥ್ ಆಚಾರ್ಯ ಮಾತನಾಡಿದರು. ಅಧ್ಯಕ್ಷ ಚಂದ್ರು, ಕಾರ್ಯದರ್ಶಿ ಗಿರೀಶ್, ಉಪಾಧ್ಯಕ್ಷ ರಾಘವೇಂದ್ರ, ಮುಖಂಡರಾದ ಇಂದ್ರೇಶ್, ಜಗದೀಶ್, ದೇವರಾಜು, ಪುಟ್ಟಸ್ವಾಮಿ, ಕುಮಾರ್ ನಾರ್ವೆ, ಶಿವು ಬೆಳ್ಳಾವರ, ಮಂಜುನಾಥ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net