ಸ್ಥಳೀಯರಲ್ಲಿ ಮನೆ ಮಾಡಿದ ಸಂಭ್ರಮ

20blrp3
Published on

ಬೇಲೂರು: ರಾಜ್ಯದಲ್ಲಿ ಕಲೆ ಮತ್ತು ಸಂಸ್ಕೃತಿಯ ಪ್ರತೀಕವಾಗಿರುವ 12 ಅಥವಾ 15ನೇ ಶತಮಾನದಲ್ಲಿ ನಿರ್ಮಾಣವಾಗಿರುವ ವಿಶ್ವವಿಖ್ಯಾತ ಶಿಲ್ಪ ಕಲೆಗಳ ತವರೂರೆಂದು ಹೆಸರಾದ ಬೇಲೂರು-ಹಳೇಬೀಡು ಜಾಗತಿಕ ಮನ್ನಣೆಯೊಂದಿಗೆ ವಿಶ್ವ ಪಾರಂಪರಿಕ ತಾಣ ಎಂದು ಘೋಷಣೆಯಾಗಿರುವುದು ಸ್ಥಳೀಯರಲ್ಲಿ ಸಂಭ್ರಮ ಮನೆ ಮಾಡಿದೆ.

ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿ ಆಯೋಜಿಸಿದ್ದ ಯುನೆಸ್ಕೋ 45ನೇ ಸರ್ವ ಸದಸ್ಯರ ಸಭೆಯಲ್ಲಿ ಈ ಮೂರು ದೇಗುಲಗಳನ್ನು ವಿಶ್ವ ಪಾರಂಪರಿಕ ತಾಣವೆಂದು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಮಹತ್ತರವಾದ ನಿರ್ಧಾರ ಕೈಗೊಂಡಿರುವುದು ದೇಶ, ರಾಜ್ಯ ಹಾಗೂ ಸ್ಥಳೀಯರಲ್ಲಿ ಸಂತಸ ಮನೆ ಮಾಡುವಂತಾಗಿದೆ.

2014ರಲ್ಲೇ ಯುನೆಸ್ಕೋ ಪಟ್ಟಿಗೆ ಈ ಮೂರು ದೇಗುಲಗಳನ್ನು ಸೇರಿಸಲಾಗಿತ್ತು. ಜತೆಗೆ 2018ರಲ್ಲಿ ಭಾರತೀಯ ಪುರಾತತ್ವ ಇಲಾಖೆಗೆ ರಾಜ್ಯ ಸರ್ಕಾರ ಈ ದೇಗುಲಗಳ ಸಂಪೂರ್ಣ ಮಾಹಿತಿ ನೀಡಿತ್ತು. ಈ ಎಲ್ಲ ಬೆಳವಣಿಗೆಗಳ ನಂತರ 2022ರಲ್ಲಿ ಯುನೆಸ್ಕೋ ತಂಡ ಬೇಲೂರು-ಹಳೇಬೀಡು ದೇಗುಲಕ್ಕೆ ಆಗಮಿಸಿ ವೀಕ್ಷಿಸಿದ ನಂತರ ಸ್ಥಳೀಯ ಮುಖಂಡರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿ ವರದಿ ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಯುನೆಸ್ಕೋ ಸಭೆಯಲ್ಲಿ ಈ ದೇಗುಲಗಳ ಸೇರ್ಪಡೆಗೆ ಸರ್ವಾನುಮತದಿಂದ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಜಾಗತಿಕ ಪಟ್ಟಿಯಲ್ಲಿ ಮನ್ನಣೆ ಪಡೆದಿರುವ ಈ ದೇಗುಲಗಳಿಗೆ ಮುಂದೆ ದೇಶ-ವಿದೇಶಗಳ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಅಲ್ಲದೆ, ಬೇಲೂರು-ಹಲೇಬೀಡು ಪಟ್ಟಣಕ್ಕೆ ಇನ್ನಿಲ್ಲದಂತೆ ಮೂಲ ಸೌಕರ್ಯಗಳು ಹೆಚ್ಚು ದೊರಕಬೇಕಾಗಿದೆ.

ಬೇಲೂರು-ಹಳೇಬೀಡು ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಬೆನ್ನಲ್ಲೇ ಬೇಲೂರು ಪಟ್ಟಣದ ದೇಗುಲಗಳ 100 ಮೀಟರ್ ಒಳ ಭಾಗದಲ್ಲಿರುವ ಮನೆ, ಅಂಗಡಿ ಮುಂಗಟ್ಟುಗಳ ಕಟ್ಟಡಗಳ ಮಾಲೀಕರು ಹಾಗೂ ಸಾರ್ವಜನಿಕರು ಮುಂದಿನ ದಿನಗಳಲ್ಲಿ ಯುನೆಸ್ಕೋ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದರ ಬಗ್ಗೆ ಅಲ್ಲಲ್ಲಿ ಚರ್ಚೆ ನಡೆಯುತ್ತಿದೆ. ಜತೆಗೆ ಬೇಲೂರು-ಹಳೇಬೀಡು ದೇಗುಲಗಳು ವಿಶ್ವ ಪಾರಂಪಾರಿಕ ಪಟ್ಟಿಗೆ ಸೇರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಸೇರಿದಂತೆ ದೇಗುಲದ ಪ್ರವಾಸಿ ಮಾರ್ಗದರ್ಶಿಗಳು ಹರ್ಷ ವ್ಯಕ್ತಪಡಿಸಿ ದೇಗುಲಕ್ಕೆ ಆಗಮಿಸಿದ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಸಿಹಿ ಹಂಚಿ ಸಂತಸ ವ್ಯಕ್ತ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net