

ತಿ.ನರಸೀಪುರ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮೀನುಗಾರರ ವಿಭಾಗದ ಪದಾಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲು ಶ್ರಮಿಸಬೇಕು ಎಂದು ನೂತನ ಅಧ್ಯಕ್ಷ ಕೊಳತ್ತೂರು ಕೆ.ಎನ್.ಕುಮಾರ್ ಕರೆ ನೀಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ತಿ.ನರಸೀಪುರ ಹಾಗೂ ಬನ್ನೂರು ಬ್ಲಾಕ್ ಕಾಂಗ್ರೆಸ್ ಮೀನುಗಾರರ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಬರಲಿರುವ ಪ್ರತಿಯೊಂದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪೂರಕ ವಾತಾವರಣವನ್ನು ನಿರ್ಮಾಣ ಮಾಡಬೇಕಿರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹಾಗೂ ಮೀನುಗಾರರ ಘಟಕದ ಜಿಲ್ಲಾಧ್ಯಕ್ಷ ಎಸ್.ಸಿದ್ದಯ್ಯ ಅವರ ಮಾರ್ಗದರ್ಶನದಲ್ಲಿ ಸಮಿತಿಗಳಿಗೆ 35 ಜನರನ್ನು ಆಯ್ಕೆ ಮಾಡಲಾಗಿದೆ. ಪದಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಮೀನುಗಾರರ ಸಮಸ್ಯೆ ಬಗ್ಗೆ ಪಟ್ಟಿ ಮಾಡಿದರೆ ಅದನ್ನು ಜಿಲ್ಲಾ ಮಟ್ಟಕ್ಕೆ ತಲುಪಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತದೆ. ಜತೆಗೆ ಸರ್ಕಾರದ ಪಂಚ ಗ್ಯಾರಂಟಿಗಳ ಬಗ್ಗೆಯೂ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಡಿಸಿಸಿ ಸದಸ್ಯ ಕುಕ್ಕೂರು ಗಣೇಶ್ ಮಾತನಾಡಿ, ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಿ ಮುಂಬರುವ ಚುನಾವಣೆಗಳು ಹಾಗೂ ಪಕ್ಷದ ಕಾರ್ಯಕ್ರಮಗಳಿಗೆ ಸಂಘಟಿತರಾಗಿ ಕೆಲಸ ಮಾಡುವ ಉದ್ದೇಶದಿಂದ ಬನ್ನೂರು ಮತ್ತು ತಿ.ನರಸೀಪುರ ಬ್ಲಾಕ್ ಕಾಂಗ್ರೆಸ್ ಮೀನುಗಾರರ ಘಟಕಕ್ಕೆ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ. ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಅಧ್ಯಕ್ಷರಿಗೆ ಎಲ್ಲರೂ ಸಹಕಾರ ನೀಡುವ ಮೂಲಕ ಪಕ್ಷದ ಸಂಘಟನೆ ಬಲಪಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಬನ್ನೂರು ಘಟಕದ ಅಧ್ಯಕ್ಷ ಸುರೇಂದ್ರ ಹಾಗೂ ಬೂದಹಳ್ಳಿ ಸಿದ್ದರಾಜು ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಆರ್.ಸೋಮಣ್ಣ, ಎಸ್.ರಾಜೇಶ್, ಸಚಿವರ ಆಪ್ತ ಸಹಾಯಕ ಬಿ.ಬಸವರಾಜು, ಮುಖಂಡರಾದ ಮಹದೇವಯ್ಯ, ಕುಕ್ಕೂರು ಲೋಕೇಶ್, ಗದ್ದೆಮೊಳೆ ಸಿದ್ದರಾಜು, ಮೇದನಿ ಕುಮಾರ್, ಶಾಂತರಾಜು ನಾಗಲಗೆರೆ, ಮಾದೇಶ ಕಾಳಬಸವನಹುಂಡಿ, ಬಸವರಾಜಪ್ಪ, ಕೆಬ್ಬೆಹುಂಡಿ ಮಹದೇವಣ್ಣ, ಟೌನ್ ರಾಘವೇಂದ್ರ, ಕಟ್ಟೆಹುಂಡಿ ಶ್ರೀನಿವಾಸ್, ಜೆ.ಸಿದ್ದರಾಜು, ಮರಿಸ್ವಾಮಿ ನಾಯಕ, ಪುಟ್ಟಮಾದ ನಾಯಕ, ಅಪ್ಪು ಕಿರಣ್, ಪ್ರದೀಪ್, ನಿತಿನ್, ರಂಗಸ್ವಾಮಿ, ಕೆ.ಮಾದೇಶ್, ಸತ್ಯ, ನಿಂಗರಾಜು, ಶೇಖರ್ ಹಾಗೂ ಇತರರು ಇದ್ದರು.